ಸಿಎಂ ಬೊಮ್ಮಾಯಿಗೆ ಬಿಎಸ್​ವೈ ಪತ್ರ: ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ನಾಮಕರಣ ಮಾಡುವ ಬದಲು ರಾಷ್ಟ್ರಕ್ಕೆ ದೊಡ್ಡ ಕೊಡುಗೆ ನೀಡಿದ ಮಹನೀಯರ ಹೆಸರಿಡುವುದು ಸೂಕ್ತ. ಈ ಬಗ್ಗೆ ಪರಿಶೀಲಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪತ್ರ ಬರೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಬಹುದಿನದ ವಿಮಾನ ನಿಲ್ದಾಣ ಕನಸು ನನಸಾಗುತ್ತಿದೆ. ಸೋಗಾನೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿಯನ್ನು ಇತ್ತೀಚೆಗೆ ತಾವು ವೀಕ್ಷಣೆ ಮಾಡಿದ ಸಂದರ್ಭದಲ್ಲಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಅಗತ್ಯ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡುವುದಾಗಿ ತಿಳಿಸಿರುವುದಕ್ಕೆ ತಮಗೆ ಧನ್ಯವಾದಗಳು. ಶಿವಮೊಗ್ಗದ ಈ ಹೊಸ ವಿಮಾನ ನಿಲ್ದಾಣಕ್ಕೆ ನನ್ನ ಹೆಸರನ್ನಿಡುವುದಾಗಿ ತಾವು ಘೋಷಿಸಿರುತ್ತೀರಿ. ತಮ್ಮ ಈ ವಿಶೇಷವಾದ ಪ್ರೀತಿ, ಅಭಿಮಾನಕ್ಕೆ ಧನ್ಯವಾದಗಳು.
ಇದಕ್ಕಾಗಿ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಘ ಸಂಸ್ಥೆಗಳು ಹಾಗೂ ಎಲ್ಲ ಮುಖಂಡರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ರಾಷ್ಟ್ರದ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಅನೇಕ ಮಹನೀಯರು ಹಾಗೂ ದೇಶಭಕ್ತರಿದ್ದಾರೆ. ಅವರು ನೀಡಿರುವ ಕೊಡುಗೆಗೆ ಹೋಲಿಸಿದಾಗ ನನ್ನದೊಂದು ಅಳಿಲು ಸೇವೆ ಮಾತ್ರ ಹಾಗೂ ನನ್ನನ್ನು ಸತತವಾಗಿ ಬೆಂಬಲಿಸಿ ಸಲುಹಿದ ಜಿಲ್ಲೆಯ ಜನತೆಗೆ ಸೇವೆ ಮಾಡಿದ್ದೇನೆಂಬ ಧನ್ಯತಾಭಾವ ನನ್ನದು. ಈ ಹಿನ್ನೆಲೆಯಲ್ಲಿ ನೂತನ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಸೂಕ್ತವಲ್ಲವೆಂದು ಭಾವಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಸಿಎಂಗೆ ಬಿಎಸ್​ವೈ ಪತ್ರ ಬರೆದಿದ್ದಾರೆ.ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನಿರ್ಧಾರವನ್ನು ಪುನರ್ ಪರಿಶೀಲಿಸಿ, ಸೂಕ್ತ ವೇದಿಕೆಯಲ್ಲಿ ಚರ್ಚಿಸಿ, ರಾಷ್ಟ್ರದ, ನಾಡಿನ ಅಭಿವೃದ್ಧಿಗೆ ಹಾಗೂ ಇತಿಹಾಸಕ್ಕೆ ಕೊಡುಗೆ ನೀಡಿದಂತಹ ಮಹನೀಯರ ಹೆಸರನ್ನು ಈ ಹೊಸ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂದು ಕೋರುತ್ತೇನೆ ಎಂದು ಪತ್ರದ ಮೂಲಕ ಸಿಎಂಗೆ ಯಡಿಯೂರಪ್ಪ ಮನವಿ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!