ಎಂಎಫ್ ಹುಸೇನ್ ಚಿತ್ರ ಬಲವಂತವಾಗಿ ಖರೀದಿಸುವಂತೆ ಮಾಡಿ ಆ ಹಣ ಸೋನಿಯಾ ಚಿಕಿತ್ಸೆಗೆ ಬಳಸಲಾಯ್ತು: ರಾಣಾ ಕಪೂರ್‌

ಹೊಸ ದಿಗಂತ ಡಿಜಿಟಲ್‌ ಡೆಸ್ಕ್‌
ವಿವಾದಿತ ಚಿತ್ರಕಾರ ಎಂಎಫ್ ಹುಸೇನ್ ರ ಪೇಂಟಿಂಗ್‌ ಒಂದನ್ನು ಖರೀದಿಸುವಂತೆ ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ ವಾದ್ರಾ ಬಲವಂತ ಪಡಿಸಿದ್ದರು. ಆ ಚಿತ್ರವನ್ನು ಖರೀದಿಸಿದ ಹಣವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವೈದ್ಯಕೀಯ ಚಿಕಿತ್ಸೆಗಾಗಿ ಗಾಂಧಿ ಕುಟುಂಬ ಬಳಸಿಕೊಂಡಿತು ಎಂದು ʼಎಸ್‌ʼ ಬ್ಯಾಂಕ್‌ ನ ಸಹ ಸಂಸ್ಥಾಪಕ ರಾಣಾ ಕಪೂರ್‌ ಜಾರಿ ನಿರ್ದೇಶನಾಲಯದ ಮುಂದೆ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.
ಹಣ ದುರುಪಯೋಗ ಪ್ರಕರಣದಲ್ಲಿ 2020 ರಲ್ಲಿರಾಣಾ ಕಪೂರ್‌ ಬಂಧನವಾಗಿತ್ತು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಎಂ.ಎಫ್. ಹುಸೇನ್ ಪೇಂಟಿಂಗ್ ಅನ್ನು ಖರೀದಿಸಲು ನಿರಾಕರಿಸಿದರೆ ನೀವು ಗಾಂಧಿ(ನೆಹರೂ) ಕುಟುಂಬಕ್ಕೆ ಹತ್ತಿರವಾಗಲಾರಿರಿ, ಮಾತ್ರವಲ್ಲದೆ ನೀವು ಪದ್ಮಭೂಷಣ ಪ್ರಶಸ್ತಿ ಪಡೆಯುವುದನ್ನು ಇದು ತಡೆಯುತ್ತದೆ ಎಂದು ಆಗಿನ ಪೆಟ್ರೋಲಿಯಂ ಸಚಿವ ಮುರಳಿ ದೇವೋರಾ ಹೇಳಿದ್ದರು ಎಂದು ಕಪೂರ್ ಇಡಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಯೆಸ್ ಬ್ಯಾಂಕ್ ಸಹ-ಸಂಸ್ಥಾಪಕ ರಾಣಾ ಕಪೂರ್‌ ಹಾಗೂ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನ ಕಪಿಲ್ ಮತ್ತು ಧೀರಜ್ ವಾಧವನ್ ಮತ್ತಿತರರು 50.50 ಕೋಟಿ ಹಣ ವಂಚಿಸಿರುವ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಈ ಸಂಬಂಧ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿರುವ ಎರಡನೇ ಚಾರ್ಜ್ ಶೀಟ್ ನಲ್ಲಿ ರಾಣಾ ಕಪೂರ್‌ ರ ಈ ಮೇಲಿನ ಹೇಳಿಕೆಗಳು ದಾಖಲಾಗಿವೆ.
ಹುಸೇನ್‌ ಪೇಂಟಿಂಗ್‌ ಖರೀದಿಗೆ ನಾನು 2 ಕೋಟಿ ರೂ. ಮೌಲ್ಯದ ಚೆಕ್ ಪಾವತಿಸಿದ್ದೆ. ಈ ಹಣವನ್ನು ಗಾಂಧಿ ಕುಟುಂಬವು ನ್ಯೂಯಾರ್ಕ್‌ನಲ್ಲಿ ಸೋನಿಯಾ ಗಾಂಧಿಯವರ ವೈದ್ಯಕೀಯ ಚಿಕಿತ್ಸೆಗಾಗಿ ಬಳಸಿದೆ ಎಂಬ ವಿಚಾರವನ್ನು ನನಗೆ ಮಿಲಿಂದ್ ದಿಯೋರಾ (ದಿವಂಗತ ಮುರಳಿ ದೇವ್ರಾ ಅವರ ಪುತ್ರ ಮತ್ತು ಮಾಜಿ ಕಾಂಗ್ರೆಸ್ ಸಂಸದ) ಮಾರಾಟದ ಗೌಪ್ಯವಾಗಿ ತಿಳಿಸಿದ್ದರು ಎಂದು ಅವರು ಹೇಳಿದ್ದಾರೆ.
ಇದೇ ವಿಚಾರವಾಗಿ ನನ್ನ ಬಳಿ ಮಾತನಾಡಿದ್ದ ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್, ನಾನು ಸೂಕ್ತ ಸಮಯದಲ್ಲಿ ಸೋನಿಯಾ ಗಾಂಧಿಯವರ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವುದರ ಮೂಲಕ ಗಾಂಧಿ ಕುಟುಂಬಕ್ಕೆ ಒಳ್ಳೆಯದ್ದನ್ನು ಮಾಡಿದ್ದೇನೆ ಎಂದು ಶ್ಲಾಘಿಸಿದ್ದರು ಎಂದು ಕಪೂರ್ ಇಡಿಗೆ ತಿಳಿಸಿದ್ದಾರೆ. ಅಲ್ಲದೇ ಸಹಾಯಕ್ಕೆ ಪ್ರತಿಯಾಗಿ ನನ್ನನ್ನು ʼಪದ್ಮಭೂಷಣʼ ಪ್ರಶಸ್ತಿಗೆ ಪರಿಗಣಿಸಲಾಗುವುದು ಎಂಬ ಭರವಸೆ ನೀಡಿದ್ದರು ಎಂದಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸೂಚನೆ ಮೇರೆಗೆ ಈ ಪೇಂಟಿಂಗ್‌ ಖರೀದಿಗೆ ಮನವೊಲಿಸಲು ಮುರಳಿ ದೇವ್ರಾ ಸಾಕಷ್ಟು ಮನವೊಲಿಸಿದ್ದರು. ಚಿತ್ರ ಖರೀದಿಗೆ ನಿರಾಕರಿಸಿದರೆ ಪದ್ಮಭೂಷಣ ಪ್ರಶಸ್ತಿ ತಪ್ಪಿಹೋಗುವುದಲ್ಲದೇ,ಯೆಸ್ ಬ್ಯಾಂಕ್ ಮೇಲೆಯೂ “ಪ್ರತಿಕೂಲ ಪರಿಣಾಮಗಳನ್ನು” ಬೀರಬಹುದು ಎಂದು ಅವರು ಎಚ್ಚರಿಸಿದ್ದರು ಎಂದು ಕಪೂರ್ ಇಡಿಗೆ ನೀಡಿದ ಹೇಳಿಕೆಯಲ್ಲಿ ಹೇಳಿದ್ದಾರೆ.  ಆದರೆ ವಾಸ್ತವವಾಗಿ ನನಗೆ ಈ ಒಪ್ಪಂದಕ್ಕೆ ಇಷ್ಟವಿರಲಿಲ್ಲ. ಮತ್ತು ಅವರ ಕರೆಗಳು / ಸಂದೇಶಗಳು ಮತ್ತು ವೈಯಕ್ತಿಕ ಸಭೆಗಳನ್ನು ನಿರ್ಲಕ್ಷಿಸುವ ಮೂಲಕ ನಾನು ಹಲವಾರು ಬಾರಿ ಈ ಒಪ್ಪಂದವನ್ನು ತಪ್ಪಿಸಲು ಪ್ರಯತ್ನಿಸಿದೆ, ”ಎಂದು ಕಪೂರ್‌ ತಿಳಿಸಿದರು.
ಈ ಒಪ್ಪಂದವನ್ನು ತಪ್ಪಿಸಲು ನಾನು ಹಲವಾರು ಪ್ರಯತ್ನಗಳನ್ನು ನಡೆಸಿದ ಹೊರತಾಗಿಯೂ ಅವರು ಶೀಘ್ರವಾಗಿ ಒಪ್ಪಂದವನ್ನು ಅಂತಿಮಗೊಳಿಸಲು ಪಟ್ಟುಹಿಡಿದರು ಎಂದು ಕಪೂರ್ ಹೇಳಿದ್ದಾರೆ.
ನಾವು(ಕುಟುಂಬ) ದೊಡ್ಡ ಮೊತ್ತದ ಕಲಾಕೃತಿಗಳ ಸಂಗ್ರಾಹಕಾರರಲ್ಲ, ಆದರೆ ದೇಶದ ʼಶಕ್ತಿಶಾಲಿʼ ಕುಟುಂಬದೊಂದಿಗೆ ದ್ವೇಷವನ್ನು ಕಟ್ಟಿಕೊಳ್ಳಲು ಭಯವಾದ್ದರಿಂದ ಮುಂದುವರಿಯಬೇಕಾಯಿತು. ಈ ಒಪ್ಪಂದದ ವಿಧಿವಿಧಾನಗಳನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕಚೇರಿಯಲ್ಲಿ ನಡೆಸಲಾಯಿತು. ಈ ಒಪ್ಪಂದಕ್ಕಾಗಿ ನಾನು ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿರುವ ನನ್ನ ವೈಯಕ್ತಿಕ ಖಾತೆಯ ಚೆಕ್ ಮೂಲಕ 2 ಕೋಟಿ ರೂಪಾಯಿಗಳನ್ನು ಪಾವತಿಸಿದ್ದೇನೆ ಎಂದು ರಾಣಾ ಹೇಳಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!