ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆ ಎಲ್ಲ ರೀತಿಯಿಂದಲೂ ಸರ್ವಶಕ್ತಳು. ಪ್ರಸ್ತುತ ಜಗತ್ತಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸಮಾನವಾಗಿ ಮಹಿಳೆ ನಿಂತಿದ್ದಾಳೆ. ಮನೆಯಲ್ಲಿ ಮಗುವನ್ನು ಬೆಳೆಸುವ ಮುದ್ದಿನ ತಾಯಿಯಿಂದ ಹಿಡಿದು ದೇಶದ ಗಡಿಯಲ್ಲಿ ಬಂದೂಕು ಹಿಡಿದು ನಿಲ್ಲುವ ಸೇನಾನಿಯಾಗಿ ಮಹಿಳೆ ತನ್ನ ಕೊಡುಗೆ ನೀಡುತ್ತಿದ್ದಾಳೆ. ಪ್ರಸ್ತುತ ದೇಶದ ಗಡಿಕಾಯುವ ಉನ್ನತ ಜವಾಬ್ದಾರಿಯಲ್ಲಿ ಮಹಿಳೆಗೂ ಅವಕಾಶ ಕಲ್ಪಿಸಲಾಗುತ್ತಿದೆ. ಭಾರತ-ಬಾಂಗ್ಲಾದೇಶ ಗಡಿಯ ಸುಂದರ್‌ಬನ್ಸ್ ಸೆಕ್ಟರ್‌ನಲ್ಲಿರುವ ಫ್ಲೋಟಿಂಗ್ ಬಾರ್ಡರ್ ಔಟ್‌ಪೋಸ್ಟ್ (ಬಿಒಪಿ) ಮೇಲೆ ಮಹಿಳಾ ಕಾನ್‌ಸ್ಟೆಬಲ್‌ಗಳ ತುಕಡಿಯನ್ನು ನಿಯೋಜಿಸುವ ಮೂಲಕ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಇತಿಹಾಸವನ್ನು ಸೃಷ್ಟಿಸಿದೆ.
ಅಂತರರಾಷ್ಟ್ರೀಯ ಗಡಿಯ ನದಿ ಪ್ರದೇಶಗಳಲ್ಲಿ ನಿಯೋಜಿಸಲಾದ ಆರು ಹೊರಠಾಣೆಗಳಲ್ಲಿ ಒಂದು ಹೊರಠಾಣೆಯ ಜವಬ್ದಾರಿಯನ್ನು ಈಗ ವೀರನಾರಿಮಣಿಗಳು ನಿರ್ವಹಿಸುತ್ತಿದ್ದಾರೆ. ಈ ಹೊರಠಾಣೆಗಳನ್ನು floating outpost ಅಂದರೆ ತೇಲುವ ಹೊರಠಾಣೆಗಳು ಎನ್ನಲಾಗುತ್ತದೆ. ಇವು ಅತ್ಯಾಧುನಿಕ ದೋಣಿಗಳನ್ನು ಹೋಲುವ ದೊಡ್ಡ ತೇಲುವ ಹಡಗುಗಳಾಗಿವೆ. ಅವುಗಳು ಆಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿವೆ. ಇವುಗಳನ್ನು ಕೊಚ್ಚಿನ್ ಶಿಪ್‌ಯಾರ್ಡ್ಸ್ ಲಿಮಿಟೆಡ್‌ನಿಂದ ಬಿಎಸ್‌ಎಫ್‌ನ ವಾಟರ್ ವಿಂಗ್‌ಗಾಗಿ ವಿನ್ಯಾಸಗೊಳಿಸಲಾಗಿದೆ. ಈ ತೇಲುವ ಹೊರಠಾಣೆಗಳಿಗೆ ʼಗಂಗಾ’ ಎಂದು ಹೆಸರಿಸಲಾಗಿದೆ, ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಧಮಾಖಾಲಿ ಗ್ರಾಮದಿಂದ 50 ಕಿಲೋಮೀಟರ್‌ಗಳಷ್ಟು ದೂರದಲ್ಲಿ ಇವುಗಳನ್ನು ನಿಯೋಜಿಸಲಾಗಿದೆ.
ಹನ್ನೊಂದು ಸದಸ್ಯರ ಮಹಿಳೆಯರ ತಂಡವು ಈ ತೇಲು ಹೊರಠಾಣೆಯನ್ನು ನಿರ್ವಹಿಸುತ್ತಿದ್ದು ಕಾಳಿಂದಿ ಮತ್ತು ದಮ್ಸಾ ನದಿಗಳ (ಹೂಗ್ಲಿ ನದಿಯ ಉಪನದಿಗಳು) ಮತ್ತು ರಾಯಮಂಗಲ ನದಿಯ ಉದ್ದಕ್ಕೂ ಗಸ್ತು ತಿರುಗುತ್ತದೆ, ಅದರ ಮೂಲಕ ಎರಡು ದೇಶಗಳ ನಡುವಿನ ಗಡಿಯ ಮೇಲೆ ನಿಗಾ ಇಡಲಾಗುತ್ತದೆ.
ಬಿಎಸ್‌ಎಫ್ 2008ನೇ ಇಸವಿಯಿಂದ ಮಹಿಳೆಯರನ್ನು ನಿಯೋಜಿಸಿಕೊಳ್ಳುತ್ತಿದ್ದು ಅವರಿಗೆ ಕಠಿಣ ತರಬೇತಿ ನೀಡಿ ಗಡಿ ಕಾವಲಿಗೆ ನಿಯೋಜಿಸುತ್ತಿದೆ. ಇವರನ್ನು ʼಮಹಿಳಾ ಪ್ರಹಾರಿʼಗಳು ಎಂದು ಕರೆಯಲಾಗುತ್ತದೆ. ಪ್ರಸ್ತುತ ಸುಂದರಬನ್ ಕಾಡುಗಳಲ್ಲಿ ನಿಯೋಜನೆಗೊಂಡಿರುವ ಮಹಿಳಾ ಪ್ರಹಾರಿಗಳ ದಳದ ನೇತೃತ್ವವನ್ನು ಸಬ್ ಇನ್ಸ್‌ಪೆಕ್ಟರ್ ಶ್ರೇಣಿಯ ಮಹಿಳೆ ವಹಿಸಿದ್ದಾರೆ ಮತ್ತು ಎಲ್ಲಾ ಸಿಬ್ಬಂದಿಗಳು INSAS ರೈಫಲ್‌ಗಳನ್ನು ಹೊಂದಿದ್ದಾರೆ. ಹನ್ನೊಂದು ಜನ ನಾರಿಯರು ಈ ತಂಡದಲ್ಲಿದ್ದಾರೆ. ಗಡಿ ರಕ್ಷಣೆಯ ಜೊತೆ ಅಕ್ರಮ ನುಸುಳುವಿಕೆ. ಕಳ್ಳಸಾಗಣೆ ಮುಂತಾದವುಗಳನ್ನು ಪರಿಣಾಮಕಾರಿಯಾಗಿ ತಡೆಯಲು ಅದರಲ್ಲೂ ವಿಶೇಷವಾಗಿ ಮಹಿಳಾ ಕಳ್ಳಸಾಗಣೆದಾರರನ್ನು ಪತ್ತೆಹಚ್ಚಲೆಂದೇ ವಿಶೇಷವಾಗಿ ಈ ಮಹಿಳಾ ತುಕಡಿಯನ್ನು ನಿಯೋಜಿಸಲಾಗಿದೆ.