September 11, 2026
Friday, September 11, 2026
spot_img

ಬಿಎಸ್‌ಎಫ್ ಕಚೇರಿ ಹೊರಗೆ ಸ್ಕೂಟರ್ ಸ್ಫೋಟ‌ : ಕೂದಲೆಳೆ ಅಂತರದಲ್ಲಿ ಪಾರಾದ ಡೆಲಿವರಿ ಬಾಯ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜಲಂಧರ್ ಕ್ಯಾಂಟೋನ್ಮೆಂಟ್‌ನಲ್ಲಿರುವ ಗಡಿ ಭದ್ರತಾ ಪಡೆ (BSF) ಪಂಜಾಬ್ ಫ್ರಾಂಟಿಯರ್ ಪ್ರಧಾನ ಕಚೇರಿಯ ಹೊರಗೆ ಮಂಗಳವಾರ ಸಂಜೆ ಭೀಕರ ಸ್ಫೋಟವೊಂದು ಸಂಭವಿಸಿದೆ.

ನಿನ್ನೆ ರಾತ್ರಿ ಸುಮಾರು 8 ಗಂಟೆಗೆ ಬಿಎಸ್‌ಎಫ್ ಚೌಕ್ ಬಳಿ ಖಾಸಗಿ ಕಂಪನಿಯೊಂದರ ಡೆಲಿವರಿ‌ ಬಾಯ್ ಗುರ್ಪ್ರೀತ್ ಸಿಂಗ್, ಬಿಎಸ್‌ಎಫ್ ಸಿಬ್ಬಂದಿಗೆ ಪಾರ್ಸೆಲ್ ತಲುಪಿಸಲು ಬಂದಿದ್ದರು. ಈ ವೇಳೆ ಪಾರ್ಸೆಲ್ ನೀಡಲು ಒಳಗೆ ಹೋದ ಸಮಯದಲ್ಲಿ, ಸ್ಕೂಟರ್‌ ಭೀಕರವಾಗಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಸ್ಕೂಟರ್ ಸಂಪೂರ್ಣವಾಗಿ ಧ್ವಂಸಗೊಂಡು ಬೆಂಕಿ ಹೊತ್ತಿಕೊಂಡಿತು. ಅಲ್ಲದೆ, ಸಮೀಪದ ಕಟ್ಟಡದ ಕಿಟಕಿ ಗಾಜುಗಳು ಪುಡಿಯಾಗಿವೆ.

ಪಾರ್ಸೆಲ್ ನೀಡಿ ಹಿಂತಿರುಗುತ್ತಿದ್ದ ಗುರ್ಪ್ರೀತ್ ಸಿಂಗ್ ಸ್ಫೋಟದ ಸ್ಥಳದಿಂದ ಸುಮಾರು 50 ಮೀಟರ್ ದೂರದಲ್ಲಿದ್ದ ಕಾರಣ ಅವರಿಗೂ ಗಾಯಗೊಂಡಿದ್ದಾರೆ. ಈ ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಸದ್ಯ ತನಿಖೆ ನಡೆಯುತ್ತಿದೆ.

ಸ್ಕೂಟರ್‌ನ ಬಾಕ್ಸ್‌ನಲ್ಲಿದ್ದ, ಪಾರ್ಸೆಲ್‌ನಿಂದ ಈ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಮೀಪದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಈ ಘಟನೆಯಿಂದ ಇಡೀ ಪ್ರದೇಶದಲ್ಲಿ ಆತಂಕ ಮನೆಮಾಡಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ರಾತ್ರಿ ಸುಮಾರು 8.15 ಕ್ಕೆ ಬಿಎಸ್‌ಎಫ್ ಚೌಕ್ ಬಳಿ ಸ್ಫೋಟ ಸಂಭವಿಸಿ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಈ ವಾಹನ ಗುರ್ಪ್ರೀತ್ ಸಿಂಗ್ ಎಂಬುವವರಿಗೆ ಸೇರಿದ್ದಾಗಿದೆ, ಸದ್ಯ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !