May 6, 2026
Wednesday, May 6, 2026
spot_img

ಅಧಿಕಾರ ಹೋದ ಬೆನ್ನಲ್ಲೇ ಭದ್ರತೆಯೂ ಮಾಯ! ದೀದಿ ನಿವಾಸದ ಬಳಿ ಬ್ಯಾರಿಕೇಡ್‌ಗಳ ತೆರವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಬಹುಮತದೊಂದಿಗೆ ಜಯಭೇರಿ ಬಾರಿಸಿದ್ದು, ರಾಜ್ಯದಲ್ಲಿ ಹೊಸ ರಾಜಕೀಯ ಯುಗ ಆರಂಭವಾಗಿದೆ. ಈ ಅಧಿಕಾರ ಬದಲಾವಣೆಯ ಬೆನ್ನಲ್ಲೇ, ಕೋಲ್ಕತ್ತಾದ ಕಾಳಿಘಾಟ್‌ನಲ್ಲಿರುವ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದ ಸುತ್ತಮುತ್ತಲಿನ ಭದ್ರತಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ.

ಹಲವು ವರ್ಷಗಳಿಂದ ಮಮತಾ ಬ್ಯಾನರ್ಜಿ ಅವರ ನಿವಾಸವಿರುವ ಹರೀಶ್ ಚಟರ್ಜಿ ರಸ್ತೆಯಲ್ಲಿ ಅಳವಡಿಸಲಾಗಿದ್ದ ಹೈ-ಟೆಕ್ ‘ಸ್ಮಾರ್ಟ್ ಬ್ಯಾರಿಕೇಡ್’ ಹಾಗೂ ಸೀಸರ್ ಬ್ಯಾರಿಕೇಡ್‌ಗಳನ್ನು ಕೋಲ್ಕತ್ತಾ ಪೊಲೀಸರು ತೆರವುಗೊಳಿಸಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಗಳ ಭದ್ರತೆಯ ದೃಷ್ಟಿಯಿಂದ ಈ ರಸ್ತೆಯಲ್ಲಿ ಸಾರ್ವಜನಿಕ ಸಂಚಾರಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿತ್ತು. ಆದರೆ ಈಗ ಭದ್ರತೆಯನ್ನು ಕೇವಲ Z+ ಶ್ರೇಣಿಗೆ ಸೀಮಿತಗೊಳಿಸಿ, ಹೆಚ್ಚುವರಿ ಪೊಲೀಸ್ ಪಡೆಗಳನ್ನು ವಾಪಸ್ ಪಡೆಯಲಾಗಿದೆ.

ದಶಕಗಳ ನಂತರ ಮಮತಾ ನಿವಾಸದ ಮುಂದಿನ ರಸ್ತೆಯಲ್ಲಿ ಸಾರ್ವಜನಿಕರು ಮತ್ತು ವಾಹನಗಳು ಮುಕ್ತವಾಗಿ ಓಡಾಡಲು ಅವಕಾಶ ಕಲ್ಪಿಸಲಾಗಿದೆ. ಭದ್ರತಾ ಗೋಡೆಗಳು ಮರೆಯಾಗುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಮತ್ತು ಪಾದಚಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಕೇವಲ ಮಮತಾ ಬ್ಯಾನರ್ಜಿ ಮಾತ್ರವಲ್ಲದೆ, ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಕಚೇರಿ ಮತ್ತು ನಿವಾಸದ ಬಳಿಯೂ ಇದ್ದ ಬಿಗಿ ಭದ್ರತೆಯನ್ನು ಕಡಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

294 ಕ್ಷೇತ್ರಗಳ ಪೈಕಿ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಮಮತಾ ಬ್ಯಾನರ್ಜಿ ಅವರ ಕೋಟೆಯನ್ನು ಪುಡಿಗುಟ್ಟಿದೆ. ಸ್ವತಃ ಮಮತಾ ಬ್ಯಾನರ್ಜಿ ಅವರೇ ಭವಾನಿಪುರ ಕ್ಷೇತ್ರದಲ್ಲಿ ಸೋಲನುಭವಿಸಿರುವುದು ತೃಣಮೂಲ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ನೀಡಿದೆ. ಮೇ 9 ರಂದು ಹೊಸ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಬಂಗಾಳದ ಆಡಳಿತ ಯಂತ್ರದಲ್ಲಿ ಆಮೂಲಾಗ್ರ ಬದಲಾವಣೆಗಳು ನಿರೀಕ್ಷಿತವಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !