May 9, 2026
Saturday, May 9, 2026
spot_img

ಬಿಎಸ್‌ವೈ ಅಭಿಮಾನೋತ್ಸವ | ಮನದಾಳದ ಮಾತು ಬಿಚ್ಚಿಟ್ಟ ಬಿಎಸ್‌ವೈ ಅಭಿಮಾನಿಗಳು

ಹೊಸದಿಗಂತ ವರದಿ ಚಿತ್ರದುರ್ಗ:

ರೈತ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ರಾಜಕೀಯ ಜೀವನ 50 ವರ್ಷ ಪೂರೈಸಿರುವ ಅಂಗವಾಗಿ ನಗರದ ಹೊರವಲಯದ ಮದಾರ ಚೆನ್ನಯ್ಯ ಗುರುಪೀಠದ ಬಳಿಯ ಮೈದಾನದಲ್ಲಿ ಶನಿವಾರ ಬಿಎಸ್‌ವೈ ಅಭಿಮಾನೋತ್ಸವ ಹಮ್ಮಿಕೊಳ್ಳಲಾಗಿತ್ತು.

ನಾಡಿನ ಮೂಲೆ ಮೂಲೆಗಳಿಂದ ಲಕ್ಷ ಲಕ್ಷ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದರು. ಜಾತಿ, ಧರ್ಮ, ಪ್ರಾಂತ ಎಲ್ಲವನ್ನೂ ಮೀರಿ ಕಾರ್ಯಕ್ರಮಕ್ಕೆ ಅಭಿಮಾನಿಗಳು ಆಗಮಿಸಿದ್ದು ವಿಶೇಷವಾಗಿತ್ತು. ಕೆಲವರು ಮಾಧ್ಯಮದವರ ಜೊತೆ ಮಾತನಾಡಿ ತಮ್ಮ ಅಭಿಮಾನ ಹಂಚಿಕೊಂಡರು.

ಹಾವೇರಿ ಜಿಲ್ಲೆಯ ಚಿಕ್ಕಕಬ್ಬೂರು ಗ್ರಾಮದ ಕಲೀಲ್ ಮತ್ತವರ ಸ್ನೇಹಿತರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಮಗೆ ಯಡಿಯೂರಪ್ಪ ಎಂದರೆ ತುಂಬಾ ಅಭಿಮಾನ. ಅವರ ಹೋರಾಟದ ದಿನಗಳಲ್ಲಿ ಅವರ ಜೊತೆ ಯಾರೂ ಇರಲಿಲ್ಲ. ಏಕಾಂಗಿಯಾಗಿ ಹೋರಾಟ ಮಾಡಿ ಮುಖ್ಯಮಂತ್ರಿಯಾದರು. ಬಳಿಕ ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರಿಗೂ ಸೌಲಭ್ಯ ನೀಡಿದ್ದಾರೆ. ವಿಶೇಷವಾಗಿ ರೈತಪರ ಕಾಳಜಿ ಇಟ್ಟುಕೊಂಡಿರುವ ಅವರು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ಯಡಿಯೂರಪ್ಪನವರು ಬಸವತತ್ವ ಪರಿಪಾಲಕರು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಅಧಿಕಾರ ನಡೆಸಿದವರು. ಯಾವುದೇ ಬೇಧವಿಲ್ಲದೆ ಎಲ್ಲರಿಗೂ ಸೌಲಭ್ಯ ನೀಡಿದ್ದಾರೆ. ಆದರೆ ಕೆಲವು ವಿರೋಧಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಮುಸ್ಲಿಂ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗಿ 12 ವರ್ಷಗಳು ಕಳೆದಿವೆ. ಆದರೆ ಯಾವುದೇ ಮುಸ್ಲೀಮರಿಗೆ ತೊಂದರೆ ಮಾಡಿಲ್ಲ. ಹಾಗಾಗಿ ಇಲ್ಲಸಲ್ಲದ ಮಾತುಗಳನ್ನು ಹೇಳುವವರ ಮಾತು ಕೇಳಲು ನಾವು ಹುಚ್ಚರಲ್ಲ. ಪ್ರತಿಯೊಬ್ಬರೂ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ:

ಬೀದರ್ ದಕ್ಷಿಣ ಕ್ಷೇತ್ರದ ಅಭಿಮಾನಿ ಶಿವಕುಮಾರಸ್ವಾಮಿ ಮಾತನಾಡಿ, ನಮ್ಮ ಕ್ಷೇತ್ರದಿಂದ 150 ವಾಹನಗಳಲ್ಲಿ 1500 ಕಾರ್ಯಕ್ರಮಕ್ಕೆ ಜನರು ಬಂದಿದ್ದೇವೆ. ಯಡಿಯೂರಪ್ಪ ಅವರಲ್ಲಿ ಒಂದು ಪವರ್ ಇದೆ. ಅವರಿಗೆ ಅವರೇ ಸರಿಸಾಟಿ. ಅಭಿಮಾನೋತ್ಸವ ನಡೆಯುವ ಚಿತ್ರದುರ್ಗ ಮಾತ್ರವಲ್ಲ, ಈ ರಾಜ್ಯದಲ್ಲೇ ಹಬ್ಬದ ವಾತಾವರಣವಿದೆ. ನಾವು ನಮ್ಮ ಹೆಮ್ಮೆಯ ನಾಯಕನ ಕಾರ್ಯಕ್ರಮಕ್ಕೆ ಬಂದಿರುವುದು ಸಂತಸ ತಂದಿದೆ ಎಂದರು.

ಶಿವಮೊಗ್ಗದ ನಂದಿನಿ ಶೆಟ್ಟಿ ಮಾತನಾಡಿ, ಬಡವರ ಪರವಾಗಿ ಕೆಲಸ ಮಾಡಿರುವ ಯಡಿಯೂರಪ್ಪ ಅಂದರೆ ನಮಗೆ ಎಲ್ಲಿಲ್ಲದ ಅಭಿಮಾನ. ರೈತರಿಗೆ ಪ್ರತ್ಯೇಕ ಬಜೆಟ್ ಮಂಡಿಸಿದರು. ಹೆಣ್ಣುಮಗು ಹೆತ್ತವರಿಗೆ ಭಾರವಾಗಬಾರದೆಂದು ಭಾಗ್ಯಲಕ್ಷ್ಮಿ ಯೋಜನೆ ಜಾರಿ ಮಾಡಿದರು. ಈ ಹಣ ಆ ಮಗು 18 ವರ್ಷಕ್ಕೆ ಬಂದಾಗ ಕೈ ಸೇರುತ್ತದೆ. ಅಲ್ಲದೇ ಮಗುವಿನ ತಂದೆ, ತಾಯಿಗೂ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಇದು ನಮಗೆ ಈ ಮೊದಲು ತಿಳಿದಿರಲಿಲ್ಲ. ನನ್ನ ಸ್ನೇಹಿತರೊಬ್ಬರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಸಂತಸ ಹಂಚಿಕೊಂಡರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !