ಹೊಸದಿಗಂತ ಉಳ್ಳಾಲ:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಜೀವನದ ಐವತ್ತು ವರ್ಷಗಳ ಸ್ಮರಣೀಯ ಪಯಣದ ನಿಮಿತ್ತ, ಇದೇ ಮೇ 9ರ ಶನಿವಾರದಂದು ಚಿತ್ರದುರ್ಗದಲ್ಲಿ ಬೃಹತ್ ‘ಬಿಎಸ್ ವೈ ಅಭಿಮಾನೋತ್ಸವ’ ಹಮ್ಮಿಕೊಳ್ಳಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಮಂಗಳೂರು ಮಂಡಲದ ವ್ಯಾಪ್ತಿಯಿಂದ ಸಾವಿರಾರು ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ತಿಳಿಸಿದ್ದಾರೆ.
ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಕರ್ನಾಟಕ ಬಿಜೆಪಿಯ ಅಪ್ರತಿಮ ನಾಯಕ. ಶೂನ್ಯದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ ಅವರ ಪರಿಶ್ರಮ ಅನನ್ಯವಾದುದು. ಕೇವಲ ಪಕ್ಷ ಸಂಘಟನೆಯಷ್ಟೇ ಅಲ್ಲದೆ, ಸಾಮಾಜಿಕ ಕಳಕಳಿಯ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಮಂಗಳೂರು ಭಾಗದಲ್ಲೂ ಅವರ ಯೋಜನೆಗಳ ಸಾವಿರಾರು ಫಲಾನುಭವಿಗಳಿದ್ದು, ಅವರೆಲ್ಲರೂ ಈ ಸಮಾವೇಶದಲ್ಲಿ ಭಾಗವಹಿಸಿ ಕೃತಜ್ಞತೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, “ಯಡಿಯೂರಪ್ಪ ಅವರು ಬಿಜೆಪಿಯನ್ನು ಕೇವಲ ನಗರಕ್ಕೆ ಸೀಮಿತಗೊಳಿಸದೆ ಹಳ್ಳಿ-ಹಳ್ಳಿಗೂ ತಲುಪಿಸಿದ ಧೀಮಂತ ನಾಯಕ. ಅಂದು ಬಗರ್ ಹುಕುಂ ಹೋರಾಟದ ಸಮಯದಲ್ಲಿ ಅವರು ವಿಧಾನಸಭೆಯಲ್ಲಿ ಒಂಟಿ ಕಾಲಿನಲ್ಲಿ ನಿಂತು ನಡೆಸಿದ ಪ್ರತಿಭಟನೆ ಇಂದಿಗೂ ಇತಿಹಾಸ. ಭಾಗ್ಯಲಕ್ಷ್ಮಿ ಯೋಜನೆ, ಅಲೆಮಾರಿ ಜನಾಂಗದ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕ್ಯಾಬಿನೆಟ್ ಸ್ಥಾನಮಾನ ನೀಡುವ ಮೂಲಕ ಈ ಭಾಗದ ಪ್ರಗತಿಗೆ ಅವರು ದೊಡ್ಡ ಕೊಡುಗೆ ನೀಡಿದ್ದಾರೆ,” ಎಂದು ಸ್ಮರಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿಗೆ ಬಿಎಸ್ ವೈ ಅವರು ನೀಡಿದ ವಿಶೇಷ ಅನುದಾನಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಯಿತು. ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ರಾಜ್ ಕೆ.ಆರ್ ಮತ್ತು ದಯಾನಂದ ತೊಕ್ಕೊಟ್ಟು ಉಪಸ್ಥಿತರಿದ್ದರು.



