ಹೊಸದಿಗಂತ ವರದಿ ಚಿತ್ರದುರ್ಗ:
ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಕ್ಕಾಗಿ ಎಂದು ಹೋರಾಟ ಮಾಡಿದವರಲ್ಲ. ಜನರಿಗಾಗಿ ಅವರ ಹೋರಾಟ ಮಾಡಿದವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಬಿಎಸ್‌ವೈ ಅಭಿಮಾನೋತ್ಸವ ಕಾರ್ಯಕ್ರಮದ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೇರಿ ವಿಧಾನ ಸೌಧದ ಮೂರನೇ ಮಹಡಿಗೆ ಹೋಗಬೇಕು ಎಂದು ಅವರು ರಾಜಕಾರಣ ಮಾಡಿದವರಲ್ಲ. ಐದು ದಶಕಗಳ ಕಾಲ ನಾಡಿನ ರೈತರ, ಬಡವರ, ಶೋಷಿತರ ಕಣ್ಣೀರು ಒರೆಸುವ ಸಲುವಾಗಿ ಹೋರಾಟ ಮಾಡಿದವರು.
ಬಿಎಸ್‌ವೈ ಅವರು ಶೋಷಿತರ ಧ್ವನಿಯಾಗಿ ನಿಂತಿದ್ದಾರೆ. ಅವರ ವ್ಯಕ್ತಿತ್ವದ ಬಗ್ಗೆ ಇಡೀ ನಾಡಿಗೆ ಗೊತ್ತಿದೆ ಎಂದರು.
ಅಧಿಕಾರ ಬಂದಾಗ ಎಲ್ಲವೂ ಮರೆತುಹೋಗುತ್ತದೆ. ಆದರೆ ಬಿಎಸ್‌ವೈ ಅವರು ಅಪರೂಪದ ರಾಜಕಾರಣಿ. ವಿರೋಧ ಪಕ್ಷದಲ್ಲಿದ್ದಾಗ ಕಾರ್ಯಕರ್ತರನ್ನು ಯಾವ ರೀತಿ ನೋಡುತ್ತಿದ್ದರೂ ಅದೇ ರೀತಿ ಮುಖ್ಯಮಂತ್ರಿಯಾದಾಗಲೂ ನೋಡುತಿದ್ದರು. ಅದಕ್ಕಿಂತ ಹೆಚ್ಚು ಪ್ರೀತಿ, ಅಭಿಮಾನ ತೋರಿಸುತ್ತಿದ್ದರು ಎಂದು ಬಣ್ಣಿಸಿದರು.
ಇದನ್ನೂ ಓದಿ:
ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ ಚಾಮರಾಜನಗರದ ಕಾರ್ಯಕರ್ತರೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಮಾರನೇ ದಿನವೇ ಹೆಲಿಕಾಪ್ಟರ್ ಬುಕ್ ಮಾಡಿಸಿ ಮೃತ ಕಾರ್ಯಕರ್ತನ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಅಂತಹ ಮಾನವೀಯತೆಯ ಹೃದಯ ಅವರದು ಎಂದರು.
ಬೆಂಗಳೂರಿನಲ್ಲಿ ಯಾವುದಾದರೂ ಕಾರ್ಯಕ್ರಮಗಳಿಗೆ ಅಭಿಮಾನಿಗಳು, ಕಾರ್ಯಕರ್ತರು ದೂರದ ಊರಿನಿಂದ ಬಂದಿದ್ದರೆ ಅವರಿಗೆ ಏನಾದರೂ ಅನಾನುಕೂಲವಾಗಿದೆಯೇ ಎಂದು ಪರಿಶೀಲಿಸುತ್ತಿದ್ದರು. ಬಂದವರು ಮರಳುವಾಗ ಏನಾದರೂ ಆಗಿದೆಯೇ ಎಂದು ಕೇಳುತ್ತಿದ್ದರು. ನಾಲ್ಕು ಬಾರಿ ಸಿಎಂ ಆದರೂ ಕಾರ್ಯಕರ್ತರ ಮೇಲೆ ಅದೇ ಕಾಳಜಿ, ಪ್ರೇಮ, ಅಭಿಮಾನ ಇಟ್ಟುಕೊಂಡಿರುತ್ತಿದ್ದರು ಎಂದು ವಿವರಿಸಿದರು.
ಅಭಿಮಾನೋತ್ಸವಕ್ಕೆ ಲಕ್ಷಾಂತರ ಜನರ ಬಸ್ ಹಾಗೂ ಕಾರುಗಳಲ್ಲಿ ಬರ್ತಾ ಇದ್ದಾರೆ. ದುಬೈನಿಂದಲೂ ಬರುತ್ತೇವೆ ಎಂದು ಕರೆ ಮಾಡಿದ್ದಾರೆ. ಇದು ಯಶಸ್ಸು ಆಗುವಲ್ಲಿ ಪ್ರಬಂಧಕರ ಜವಾಬ್ದಾರಿ ಹೆಚ್ಚಿದೆ. ಯಾರು ಯಾರು ಯಾವ ಜವಾಬ್ದಾರಿ ತೆಗೆದುಕೊಂಡಿದ್ದೀರೋ ಅದನ್ನು ಸರಿಯಾಗಿ ನಿರ್ವಹಿಸಿ ಎಂದರು ಮನವಿ ಮಾಡಿದರು.



