September 7, 2026
Monday, September 7, 2026
spot_img

1.10 ಲಕ್ಷ ಕೋಟಿ ರೂ. ಮೌಲ್ಯದ ರಕ್ಷಣಾ ಖರೀದಿಗೆ DAC ಗ್ರೀನ್‌ ಸಿಗ್ನಲ್: ಶೇ.98ರಷ್ಟು ಖರೀದಿ ಭಾರತದಲ್ಲೇ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ರಕ್ಷಣಾ ಪಡೆಗಳ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಕ್ಷಣಾ ಖರೀದಿ ಮಂಡಳಿ (DAC) 1.10 ಲಕ್ಷ ಕೋಟಿಗೂ ಅಧಿಕ ಮೌಲ್ಯದ ರಕ್ಷಣಾ ಉತ್ಪನ್ನಗಳ ಖರೀದಿ ಪ್ರಸ್ತಾವನೆಗಳಿಗೆ ಸೋಮವಾರ ಅನುಮೋದನೆ ನೀಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಭಾರತೀಯ ಸೇನೆಗೆ

ಭಾರತೀಯ ಸೇನೆಗಾಗಿ CBRN ರೆಕೀ ವಾಹನಗಳು, ಹೈ ಮೊಬಿಲಿಟಿ ವಾಹನಗಳು (HMV), ಸ್ವಯಂ ಚಾಲಿತ ಯಾಂತ್ರಿಕ ಮೈನ್ ಲೇಯರ್‌ಗಳು (MML), ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್‌ಗಳು (ALH), ಟ್ರಾಲ್ ಟ್ಯಾಂಕ್‌ಗಳು ಹಾಗೂ ಸರ್ವತ್ರ ಬ್ರಿಡ್ಜ್ ಸಿಸ್ಟಮ್ ಖರೀದಿಗೆ ಅನುಮೋದನೆ ದೊರೆತಿದೆ.

ಇದನ್ನೂ ಓದಿ:

ಭಾರತೀಯ ನೌಕಾಪಡೆಗೆ

ನೌಕಾಪಡೆಗಾಗಿ ‘ಅರುಧ್ರ’ ರಾಡಾರ್‌ಗಳ ಖರೀದಿ ಹಾಗೂ ಮೆರೈನ್ ಗ್ಯಾಸ್ ಟರ್ಬೈನ್‌ಗಳ ವಿನ್ಯಾಸ, ಅಭಿವೃದ್ಧಿ ಮತ್ತು ನಂತರದ ಖರೀದಿಗೆ ಅಗತ್ಯತೆಯ ಅನುಮೋದನೆ ನೀಡಲಾಗಿದೆ. ಅರುಧ್ರ ರಾಡಾರ್‌ಗಳು ವಿವಿಧ ನೌಕಾ ವಾಯುನೆಲೆಗಳಲ್ಲಿರುವ ಹಳೆಯ ಏರ್‌ರೂಟ್ ಸರ್ವೈಲೆನ್ಸ್ ರಾಡಾರ್‌ಗಳನ್ನು ಬದಲಾಯಿಸಲಿವೆ. ಮೆರೈನ್ ಗ್ಯಾಸ್ ಟರ್ಬೈನ್‌ಗಳಿಂದ ವಿದೇಶಿ ಪೂರೈಕೆದಾರರ ಮೇಲಿನ ಅವಲಂಬನೆ ಕಡಿಮೆಯಾಗುವ ನಿರೀಕ್ಷೆಯಿದೆ.

ಭಾರತೀಯ ವಾಯುಪಡೆಗೆ

ವಾಯುಪಡೆಗಾಗಿ ಯುದ್ಧವಿಮಾನ, ಸಾರಿಗೆ ವಿಮಾನ ಹಾಗೂ ಹೆಲಿಕಾಪ್ಟರ್‌ಗಳ ಯುದ್ಧ ಸಾಮರ್ಥ್ಯ ಹೆಚ್ಚಿಸುವ ಹಲವು ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಜೊತೆಗೆ ಗ್ರೌಂಡ್‌-ಬೇಸ್ಡ್ ಮಲ್ಟಿ-ಪರ್ಪಸ್ ಜಾಮರ್ ಮತ್ತು DEFSAC ವ್ಯವಸ್ಥೆಗೂ ಅನುಮೋದನೆ ಸಿಕ್ಕಿದೆ.

ರಕ್ಷಣಾ ಸಚಿವಾಲಯದ ಪ್ರಕಾರ, ಒಟ್ಟು ಖರೀದಿಯ ಶೇ.98ರಷ್ಟು ಭಾಗವನ್ನು ಭಾರತೀಯ ಕೈಗಾರಿಕೆಗಳಿಂದಲೇ ಕೈಗೊಳ್ಳಲಾಗುತ್ತದೆ. CBRN ವಾಹನಗಳು ಅಪಾಯಕಾರಿ ರಾಸಾಯನಿಕ, ಜೈವಿಕ, ವಿಕಿರಣ ಮತ್ತು ಅಣು ಮಾಲಿನ್ಯ ಪತ್ತೆಹಚ್ಚಲು ನೆರವಾಗಲಿವೆ. ಈ ನಿರ್ಧಾರವು ದೇಶೀಯ ರಕ್ಷಣಾ ಉತ್ಪಾದನೆಗೆ ಮತ್ತಷ್ಟು ಉತ್ತೇಜನ ನೀಡುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !