ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಆರೋಪಿಗಳನ್ನು ಪೊಲೀಸರೆದುರು ಬರುವಂತೆ ಮಾಡಿದೆ ಬುಲ್ಡೋಜರ್!

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಮೊದಲ ಅವಧಿಯಲ್ಲೇ ಬುಲ್ಡೋಜರ್ ಬಾಬಾ ಎಂದು ಪ್ರಖ್ಯಾತಿ ಗಳಿಸಿದ್ದರು. ಅಕ್ರಮವಾಗಿ ಕಟ್ಟಡ ಕಟ್ಟಿದವರು ಮತ್ತು ಅಪರಾಧ ಹಿನ್ನೆಲೆಯವರ ಆಸ್ತಿನಾಶದ ಕ್ರಮಗಳಿಂದ ಈ ಹೆಸರು ಬಂದಿತ್ತು. ಎರಡನೇ ಅವಧಿಯಲ್ಲೂ ಅದನ್ನು ಪುಷ್ಟೀಕರಿಸುವ ವಿದ್ಯಮಾನ ನಡೆದಿದೆ.

ಸಹರಾನ್ಪುರ ಜಿಲ್ಲೆಯ ಅಮೀರ್ (19) ಮತ್ತು ಆಸೀಫ್ (22) ಗ್ಯಾಂಗ್ ರೇಪ್ ಆರೋಪಿಗಳು. ಅಪ್ರಾಪ್ತ ವಯಸ್ಕ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆಯ ತಾಯಿ ಇವರ ವಿರುದ್ಧ ದೂರು ದಾಖಲಿಸಿದ್ದರು.

ಗುರುವಾರ ಮಧ್ಯಾಹ್ನದ ಹೊತ್ತಿಗೆ ಈ ಇಬ್ಬರು ಹುಡುಗರ ಮನೆ ತಲುಪಿದ ಪೊಲೀಸ್ ಪಡೆ, ಜತೆಗೆ ಬುಲ್ಡೋಜರ್ ಅನ್ನೂ ಒಯ್ದಿತ್ತು. ಆರೋಪಿಗಳು ಶರಣಾಗದಿದ್ದರೆ ಅವರ ಆಸ್ತಿ ಧ್ವಂಸ ಮಾಡುವುದಾಗಿ ಬೆದರಿಕೆಯನ್ನೂ ಹಾಕಲಾಯಿತು. ಹಳ್ಳಿಯ ಪ್ರಧಾನ ಕೂಡ ಆಗಿರುವ ಮನೆಯವರಿಗೆ ಎಚ್ಚರಿಕೆ ನೀಡಿದ್ದಲ್ಲದೇ ಆ ಮನೆಯ ಮೂರು ಮೆಟ್ಟಿಲುಗಳನ್ನು ಕಿತ್ತುಹಾಕಿರುವ ದೃಶ್ಯಗಳು ಸಹ ಹರಿದಾಡಿವೆ.

ಮನೆಯವರು ಹೇಳುವ ಪ್ರಕಾರ ತಮ್ಮ ಹುಡುಗರ ಮೇಲೆ ಸುಳ್ಳು ಕೇಸು ಹಾಕಲಾಗಿದೆ. ಅಪರಾಧ ಸಾಬೀತಾಗದ ಆರೋಪಿಗಳ ಮೇಲೆ ಇಂಥ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಪೊಲೀಸರಿಗೆ ಅಧಿಕಾರವಿದೆಯೇ ಎಂಬ ಚರ್ಚೆಗಳೂ ಇವೆಯಾದರೂ, ಕಾನೂನು-ಸುವ್ಯವಸ್ಥೆ ಹದಕ್ಕೆ ಬರಬೇಕಾದರೆ ಇಂಥ ಕ್ರಮಗಳು ಅಗತ್ಯ ಎಂಬ ಬೆಂಬಲವೂ ಜನರಿಂದ ಈ ಹಿಂದೆ ವ್ಯಕ್ತವಾಗಿದೆ.

ಅದೇನೇ ಇರಲಿ, ಗುರುವಾರ ಮಧ್ಯಾಹ್ನ ಪೊಲೀಸರು ಮಾಡಿದ ಈ ಬುಲ್ಡೋಜರ್ ಕಾರ್ಯಾಚರಣೆಯ ಪರಿಣಾಮವೆಂಬಂತೆ ಶುಕ್ರವಾರದ ಹೊತ್ತಿಗೆ ಇಬ್ಬರೂ ಆರೋಪಿಗಳು ಪೊಲೀಸ್ ಬಂಧನದಲ್ಲಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!