ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಜಲಾಲಬಾದ್ ನಲ್ಲಿ ಬೀದಿ ಗೂಳಿಯೊಂದು ಸರಣಿ ದಾಳಿ ಮಾಡಿದ್ದು, ಪರಿಣಾಮ ಬರೊಬ್ಬರಿ 15 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ದಾರಿ ತಪ್ಪಿದ ಗೂಳಿಯೊಂದು ರಸ್ತೆಯಲ್ಲಿದ್ದ ಜನರ ಮೇಲೆ ದಾಳಿ ಮಾಡಿದ್ದು, ತನ್ನ ಕೊಂಬುಗಳಿಂದ ಮನಸೋ ಇಚ್ಛೆ ದಾಳಿ ಮಾಡಿದೆ. ನೋಡ ನೋಡುತ್ತಲೇ ದಾರಿಹೋಕರ ಮೇಲೆ ದಾಳಿ ಮಾಡಿದ ಗೂಳಿ ತನ್ನ ಕೊಂಬಿನ ಮೂಲಕ ಜನರನ್ನು ತಿವಿದು ಅವರನ್ನು ಎತ್ತೆಸೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಗೂಳಿ ದಾಳಿಯಿಂದ 15 ಮಂದಿ ಗಾಯಗೊಂಡಿದ್ದು, ಓರ್ವ ವ್ಯಕ್ತಿಯ ಕಣ್ಣಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. ಗೂಳಿ ದಾಳಿಗೆ ತುತ್ತಾದ ಹಲವರ ಸೊಂಟ, ಬೆನ್ನು ಮತ್ತು ಹೊಟ್ಟೆಗೆ ಗೂಳಿ ಗುದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇನ್ನು ಗೂಳಿ ದಾಳಿ ಕುರಿತು ವಿಚಾರ ತಿಳಿದ ಕೂಡಲೇ ಗೂಳಿಯನ್ನು ಹಿಡಿಯಲು ಹೊರಟ ಜಲಾಲಾಬಾದ್ ಮುನ್ಸಿಪಲ್ ಕೌನ್ಸಿಲ್ ಗೂ ಗೂಳಿ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿತ್ತು. ಗೂಳಿ ಹಿಡಿಯಲು ಸುಮಾರು 25ಕ್ಕೂ ಅಧಿಕ ಸಿಬ್ಬಂದಿ ಬರೊಬ್ಬರಿ 3 ಗಂಟೆಗಳ ಕಾಲ ಹರಸಾಹಸ ಪಟ್ಟರು. ಆದರೆ ಅವರಿಂದ ಬಚಾವ್ ಆದ ಗೂಳಿ ಮತ್ತೆ ದಾರಿಯಲ್ಲಿ ಸಿಕ್ಕವರ ಮೇಲೆ ದಾಳಿ ಮಾಡಿದೆ.
ಬಳಿಕ ಸತತ 3 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಕೊನಗೂ ಗೂಳಿಯನ್ನು ಹಿಡಿಯುವಲ್ಲಿ ಕಾರ್ಪೋರೇಷನ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಗೂಳಿಯನ್ನು ಮುನ್ಸಿಪಲ್ ಕಚೇರಿ ಆವರಣದಲ್ಲಿ ಕಟ್ಟಿ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ವೈದ್ಯರ ಪರಿಶೀಲನೆ ಬಳಿಕ ಗೂಳಿಯನ್ನು ರವಾನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.