ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಾಸಗಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಬೆಂಗಳೂರು ವೃತ್ತದಲ್ಲಿ ನಡೆದಿದೆ.
ಬಸ್ಸಿನ ಹಿಂಭಾಗ ದೂರವಾಣಿ ಇಲಾಖೆಗೆ ಸೇರಿದ ಜಾಗದಲ್ಲಿ ನಗರ ಮತ್ತು ಗ್ರಾಮಾಂತರ ಠಾಣೆಯ ಪೊಲೀಸರು, ಅಪಘಾತ ಮತ್ತು ಇತರ ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದರು. ಬೆಂಕಿಯ ಕೆನ್ನಾಲಿಗೆಗೆ ಪಕ್ಕದಲ್ಲೇ ನಿಲ್ಲಿಸಿದ್ದ 10 ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಹೋಗಿದೆ.
ರಾತ್ರಿ ಗಸ್ತು ಮಾಡುತ್ತಿದ್ದ ಪೊಲೀಸರು ಬಸ್‌ಗೆ ಬೆಂಕಿ ತಗುಲಿರುವುದನ್ನು ಕಂಡು ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಪಕ್ಕದಲ್ಲೇ ಇರುವ ಪೆಟ್ರೋಲ್ ಬಂಕ್‌ಗೆ ಬೆಂಕಿ ವ್ಯಾಪಿಸದಂತೆ ತಡೆಯುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೋಲೀಸರು ಯಶಸ್ವಿಯಾಗಿದ್ದಾರೆ.