ಹೊಸದಿಗಂತ ವರದಿ ಉತ್ತರಕನ್ನಡ:
ಧರ್ಮಸ್ಥಳದಿಂದ ಬೆಳಗಾವಿಗೆ ಹೋಗುತ್ತಿದ್ದ ಖಾಸಗಿ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಬಸ್‌ನಲ್ಲಿದ್ದ 12 ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಮುಂಡಗೋಡ ತಾಲೂಕಿನ ಮಳಗಿ ಸನಿಹದ ಪೆಟ್ರೋಲ್ ಬಂಕ್ ಹತ್ತಿರ ಬುಧವಾರ ಬೆಳಗಿನ ಜಾವದಲ್ಲಿ ಜರುಗಿದೆ.
ಮೂಡಬಿದಿರೆಯ ಖಾಸಗಿ ಕಂಪನಿಯ ಎರಡು ಬಸ್‌ಗಳು ಧರ್ಮಸ್ಥಳದಿಂದ ಬೆಳಗಾವಿಗೆ ಯಲ್ಲಾಪುರ, ಅಂಕೋಲಾ ಮಾರ್ಗವಾಗಿ ಹೋಗಬೇಕಿತ್ತು. ರಸ್ತೆ ಹಾಳಾಗಿದ್ದರಿಂದ ಶಿರಸಿ, ಮುಂಡಗೋಡ ಮಾರ್ಗವಾಗಿ ಬೆಳಗಾವಿಗೆ ತೆರಳುತ್ತಿರುವಾಗ ಬುಧವಾರ ಬೆಳಗಿನ ಜಾವ ಮಳಗಿ ಗ್ರಾಮದ ಸನಿಹದಲ್ಲಿ ಇರುವ ಪೆಟ್ರೋಲ್ ಬಂಕ್ ಹತ್ತಿರ ಆಕಸ್ಮಿಕವಾಗಿ ಒಂದು ಬಸ್ಸಿನ ಟೈರ್ ಬ್ಲಾಸ್ಟ್ ಆಗಿ ಬೆಂಕಿ ಬಸ್‌ಗೆ ಆವರಿಸಿಕೊಂಡಿದೆ.
ಕೂಡಲೆ ಎಚ್ಚೆತ್ತುಕೊಂಡ ಚಾಲಕ ಬಸ್ಸಿನಲ್ಲಿದ್ದ ಹನ್ನೆರಡು ಜನರು ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾನೆ. ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರ ಸಹಾಯದಿಂದ ಹತ್ತಿರದ ಪೆಟ್ರೋಲ್ ಬಂಕನಲ್ಲಿರುವ ಬೆಂಕಿ ನಂದಿಸುವ ಯಂತ್ರದಿಂದ ಬೆಂಕಿ ನಂದಿಸಿದ್ದಾರೆ. ಬೆಂಕಿಯಿಂದ ಬಸ್‌ಗೆ ಹಾನಿಯಾಗಿದ್ದು, ಒಂದೂವರೆ ಲಕ್ಷ ನಷ್ಟವಾಗಿದೆ.