ಸೇವಾ ಭಾರತಿ ಟ್ರಸ್ಟ್ ನ ನೂತನ ಕಾರ್ಯ: ವಿದ್ಯಾರ್ಥಿಗಳ‌ ಹಸಿವು ನೀಗಿಸಲು ಬುತ್ತಿ ಯೋಜನೆ ಜಾರಿ

ಹೊಸದಿಗಂತ ವರದಿ ಧಾರವಾಡ:

ಸಮಾಜ ಸೇವೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.‌ ಹೇಗೆ ಹೆತ್ತವರ ಸೇವೆ ಮಾಡುತ್ತೇವೆಯೊ ಹಾಗೆ ನಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸಿದ ಸಮಾಜಕ್ಕೂ ನಾವು ಸೇವೆ ಮಾಡುವುದು ಅವಶ್ಯವಾಗಿದೆ ಎಂದು ದೇವರಹುಬ್ಬಳ್ಳಿ ಸಿದ್ಧಾರೂಢ ಮಠದ ಶ್ರೀ ಸಿದ್ಧಶಿವಯೋಗಿ ಸ್ವಾಮೀಜಿ ಹೇಳಿದರು.‌ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸೇವಾ ಭಾರತಿ ಟ್ರಸ್ಟ್ ಹಾಗೂ ಅದಮ್ಯ ಚೇತನ ಟ್ರಸ್ಟ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ‘ಬುತ್ತಿ’ ಯೋಜನೆಗೆ ಚಾಲನೆ ನೀಡಲಾಯಿತು. ಅನ್ನ ನೀಡುವಾಗಲಿ ಅಥವಾ ಸೇವಿಸುವಾಗಲಿ ಭಕ್ತಿಯ ಭಾವ ಇರಬೇಕು. ಯಾವುದೇ ವಿದ್ಯಾರ್ಥಿ ಹಸಿವಿನಿಂದಾಗಿ ತನ್ನ ಅಭ್ಯಾಸಕ್ಕೆ ತೊಂದರೆ ಆಗಬಾರದು. ಇದು ಸಮಾಜ‌ ಸೇವಾ ಕೈಂಕರ್ಯ. ಇದರ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಂಡು ವಿದ್ಯಾವಂತರಾಗಿ, ಉನ್ನತ ವಿಚಾರ ಹೊಂದಬೇಕು. ರಾಷ್ಟ್ರ ಸೇವೆಗೆ ಕೈ ಜೋಡಿಸಲು ಸಂಕಲ್ಪ‌ ಮಾಡಬೇಕು ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಮಾತನಾಡಿ, ಸೇವಾ ಭಾರತಿ ಟ್ರಸ್ಟ್ ನಿಂದ ಈ ಕಾರ್ಯ ಕೈಗೊಳ್ಳಲಾಗುತ್ತಿದೆ.‌ ಇದರ ಹಿಂದಿನ ಪ್ರೇರಣೆ ರಾಷ್ಟ್ರೀಯ ಸ್ವಯಂಸೇವಕ ಸಂಘ. ಸಂಘದ ಮೂಲ ಸಿದ್ಧಾಂತ ನಾವೆಲ್ಲ ಒಂದೇ ಕುಟುಂಬ, ಭಾರತ ಮಾತೆ ಮಕ್ಕಳು. ಇಲ್ಲಿರುವವರೆಲ್ಲ ಸುಖವಾಗಿರಬೇಕು. ಈ ದೃಷ್ಟಿಕೋನದಲ್ಲಿ ಪ್ರಸ್ತುತ ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಈ ಬುತ್ತಿ ಯೋಜನೆ ಜಾರಿಗೊಳಿಸಲಾಗಿದೆ ಎಂದರು.ಹಿಂದು ಸಂಸ್ಕೃತಿಯಲ್ಲಿ ಅನ್ನ, ವಿದ್ಯೆ ಹಾಗೂ ಔಷಧಿ ಮಾರಬಾರದು ಎಂದು ಹೇಳಲಾಗಿದೆ. ಆದರೆ ದುರ್ದೈವ ಈ ಮೂರು ದುಡ್ಡು ಮಾಡುವ ಕ್ಷೇತ್ರಗಳಾಗಿವೆ. ಪ್ರಸ್ತುತ ಯೋಜನೆ ಸರ್ಕಾರದ್ದಲ್ಲ ಬದಲಾಗಿ ಸಮಾಜದ್ದು. ಸಮಾಜವೇ ಇದಕ್ಕೆ ಸ್ಪಂದನೆ ನೀಡಿದೆ. ಇದೇ ರೀತಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ದೇಶವ್ಯಾಪಿ 1.5 ಲಕ್ಷ ಸೇವಾ ಚಟುವಟಿಕೆ ನಡೆಯುತ್ತಿವೆ ಎಂದರು.

ನಮ್ಮ ಸಂಸ್ಕೃತಿಯಲ್ಲಿ ಊಟ ಮಾಡುವುದು ಕೇವಲ ಹೊಟ್ಟೆ ತುಂಬಲು ಅಲ್ಲ ಬದಲಾಗಿ ಅದೊಂದು ಯಜ್ಞ, ದೇವರ ಪೂಜೆಗೆ ಸಮಾನ. ಹಾಗಾಗಿ ಪ್ರತಿ ಅನ್ನದ ಅಗಳನ್ನೂ ಸಹ ಪ್ರಸಾದ ರೂಪದಲ್ಲಿ ಸೇವಿಸಬೇಕು. ಊಟ ಮಾಡುವುದನ್ನು ಕಲಿಸುವುದು ಒಂದು ಸಂಸ್ಕಾರ.‌ ಈ ಯೋಜನೆ ಯಶಸ್ವಿಯಾದರೆ, ರಾಜ್ಯಾದ್ಯಾಂತ ವಿಸ್ತಾರವಾಗಲಿದೆ. ಇದಕ್ಕೆ ವಿದ್ಯಾರ್ಥಿಗಳ ಸಹಕಾರ ಅಗತ್ಯ ಎಂದರು.

ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಮಾತನಾಡಿ, ದೂರದ ಊರುಗಳಿಂದ ಈ ಮಹಾವಿದ್ಯಾಲಯಕ್ಕೆ 4.5 ಸಾವಿರ ಜನ ಕಲಿಯಲು ಬರುತ್ತಾರೆ. ಅವರ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಮಧ್ಯಾಹ್ನ ಭೋಜನ ವ್ಯವಸ್ಥೆ ಆರಂಭವಾಗಿರುವುದು ಉತ್ತಮ‌ ಸಂಗತಿ. ಇದು ಹೊಟೆಲ್ ಅಥವಾ ಕ್ಯಾಂಟಿನ್ ಅಲ್ಲ ಬದಲಾಗಿ ಮಠ ಮಂದಿರಗಳಲ್ಲಿ ಹೇಗೆ ಪ್ರಸಾದ ಸ್ವೀಕರಿಸುತ್ತೇವೆಯೊ ಅದೆ ಭಾವನೆಯಿಂದ ವಿದ್ಯಾರ್ಥಿಗಳು ಇಲ್ಲಿ ಊಟ ಮಾಡಬೇಕು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!