ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಕಾಶ್ಮೀರದಲ್ಲಿ ದೌರ್ಜನ್ಯಕ್ಕೊಳಗಾದ ಪಂಡಿತರ ಮಕ್ಕಳಿಗೆ ಉಚಿತ ವಸತಿ ಹಾಗೂ ಶಿಕ್ಷಣ ಘೋಷಿಸಲಾಗಿದೆ. ಈ ಕುರಿತು ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ ಹಾಗೂ ನಟ್ಟೋಜ ಫೌಂಡೇಶನ್‌ನ ಟ್ರಸ್ಟಿ ವೈದೇಹಿ ನಟ್ಟೋಜ ಅವರು ಇತ್ತೀಚೆಗೆ ಜಮ್ಮು ಕಾಶ್ಮೀರಕ್ಕೆ ತೆರಳಿ ಅಲ್ಲಿನ ಕಾಶ್ಮೀರಿ ಪಂಡಿತ್ ಸಂಘಟನೆ ಭೇಟಿಯಾಗಿ ಲಿಖಿತ ಭರವಸೆ ನೀಡಿದ್ದಾರೆ.
ಉಚಿತ ಸೌಲಭ್ಯ
ನಟ್ಟೋಜ ಫೌಂಡೇಶನ್ ಟ್ರಸ್ಟ್ ತನ್ನ ಆಶ್ರಯದಲ್ಲಿ ಅಂಬಿಕಾ ವಿದ್ಯಾಲಯ (ಸಿಬಿಎಸ್‌ಇ), ವಸತಿಯುಕ್ತ ಹಾಗೂ ದೈನಂದಿನ ಓಡಾಟಕ್ಕನುಗುಣವಾಗಿ ಎರಡು ಪ್ರತ್ಯೇಕ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳು ಹಾಗೂ ಅಂಬಿಕಾ ಪದವಿ ಮಹಾವಿದ್ಯಾಲಯವನ್ನು ನಡೆಸುತ್ತಿದೆ. ಆರನೆಯ ತರಗತಿಯಿಂದ ತೊಡಗಿ ಪದವಿ ಹಂತದವರೆಗೆ ಯಾವುದೇ ತರಗತಿಯಲ್ಲಿ ಓದಲು ಬಯಸುವ ಕಾಶ್ಮೀರಿ ಪಂಡಿತರ ಮಕ್ಕಳಿಗೆ ಈ ಉಚಿತ ಸೌಲಭ್ಯ ದೊರಕಲಿದೆ. ಜತೆಗೆ ಊಟೋಪಚಾರ ವಸತಿಗಳೂ ಶುಲ್ಕರಹಿತವಾಗಿ ಲಭ್ಯವಾಗಲಿವೆ. ಈ ಮಧ್ಯೆ, ಪುತ್ತೂರಿನ ಕೆಲವು ಸಹೃದಯರೂ ಈ ಯೋಜನೆಗೆ ಕೈ ಜೋಡಿಸಲಾರಂಭಿಸಿದ್ದಾರೆ. ಕಾಶ್ಮೀರಿ ಪಂಡಿತರ ಮಕ್ಕಳಿಗೆ ತಮ್ಮ ಮನೆಯಲ್ಲಿಯೇ ಉಚಿತವಾಗಿ ಆಶ್ರಯ ಹಾಗೂ ಆಹಾರ ನೀಡಿ ಅಂಬಿಕಾ ಸಂಸ್ಥೆಗಳಲ್ಲಿ ಓದಿಸುವ ಹಿನ್ನೆಲೆಯಲ್ಲಿ ಆಸಕ್ತಿ ತೋರಿದ್ದಾರೆ.
ಸುದ್ದಿಗೋಷ್ಠಿ ಮೂಲಕ ಮಾಹಿತಿ
ಜತೆಗೆ, ಜಮ್ಮುವಿನಲ್ಲಿ ಸುದ್ದಿಗೋಷ್ಟಿ ನಡೆಸಿ ಈ ಮಾಹಿತಿಯನ್ನು ಅಲ್ಲಿನ ಮಾಧ್ಯಮಗಳ ಮೂಲಕವೂ ತಿಳಿಸಿಕೊಡಲಾಗಿದೆ. ಜಮ್ಮುವಿನಲ್ಲಿ ನಡೆಸಿದ ಸುದ್ದಿಗೋಷ್ಟಿಗೆ ಮಾಧ್ಯಮ ವಲಯದಿಂದಲೂ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದ್ದು, ಅನೇಕ ವಾಹಿನಿಗಳು ಹಾಗೂ ಪತ್ರಿಕೆಗಳು ಈ ಉಚಿತ ಶಿಕ್ಷಣದ ಕೊಡುಗೆಗೆ ವ್ಯಾಪಕ ಪ್ರಚಾರ ನೀಡಿವೆ. ಸಂದರ್ಶನ ನಡೆಸಿವೆ. ಕಾಶ್ಮೀರಿ ಪಂಡಿತರ ಸಂಘಟನೆಯೂ ಈ ಕೊಡುಗೆಯ ಬಗೆಗೆ ಕೃತಜ್ಞತೆ ಸಲ್ಲಿಸಿದೆ. ಮಾತ್ರವಲ್ಲದೆ ಈಗಾಗಲೇ ನಾಲ್ಕಾರು ಮಂದಿ ಕಾಶ್ಮೀರಿ ಪಂಡಿತರು ಅಂಬಿಕಾ ಸಂಸ್ಥೆಗೆ ತಮ್ಮ ಮಕ್ಕಳನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕರೆ ಮಾಡಿ ವಿಚಾರಿಸಿದ್ದಾರೆ.
ದೌರ್ಜನ್ಯಕ್ಕೊಳಪಟ್ಟು ನಿರಾಶ್ರಿತರಾಗಿ ಆಗಮಿಸಿದ ಕಾಶ್ಮೀರಿ ಪಂಡಿತರು ಬೆಂಗಳೂರಿನಲ್ಲಿಯೂ ಅನೇಕ ಮಂದಿ ಇದ್ದು, ಅವರ ಮಕ್ಕಳಿಗೂ ಈ ಯೋಜನೆ ಲಭ್ಯವಾಗಲಿದೆ. ಆ ನೆಲೆಯಲ್ಲಿಯೇ ಕರ್ನಾಟಕದಲ್ಲೂ ಅಂಬಿಕಾ ಸಂಸ್ಥೆಯ ಕೊಡುಗೆಯ ಬಗೆಗೆ ಮರು ಪ್ರಕಟಣೆ ನೀಡಲಾಗುತ್ತಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ