ಹೊಸದಿಗಂತ ಡಿಜಿಟಲ್ ಡೆಸ್ಕ್:
ದಶಕದ ಬಳಿಕ ಕಲ್ಯಾಣ ಕರ್ನಾಟಕ ವಿಭಾಗೀಯ ಕೇಂದ್ರ ಸ್ಥಾನ ಕಲಬುರಗಿಯಲ್ಲಿಸಚಿವ ಸಂಪುಟ ಸಭೆ ನಡೆಯಲಿದೆ.
ಸೆ.17ರಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಂಪುಟ ಸಭೆ ನಡೆಯುವ ಹಿನ್ನೆಲೆಯಲ್ಲಿ ಸಭೆ ನಡೆಯುವ ಸ್ಥಳ ಮಿನಿವಿಧಾನಸೌಧ ಕಟ್ಟಡದಲ್ಲಿ ಭರಪೂರ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ನಡೆಯಲಿರುವ ಸಚಿವ ಸಂಪುಟ ಸಭೆಯಿಂದಾಗಿ ಈ ಭಾಗದ ಜನರ ಆಸೆಗಳು ಗರಿಗೆದರಿವೆ.
ಕಳೆದ ಒಂದು ದಶಕದ ಹಿಂದೆ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು. ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯ ಹಿನ್ನೆಲೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಕಟ್ಟಡಕ್ಕೆ ಬಣ್ಣ ಹಚ್ಚುವುದರ ಜೊತೆಗೆ ಗ್ರಿಲ್, ಗೇಟ್‌ಗಳಿಗೆ ಪೇಂಟ್ ಮಾಡಲಾಗುತ್ತಿದೆ. ಆವರಣದಲ್ಲಿ ಡಾಂಬರೀಕರಣ ಸಹ ಮಾಡಲಾಗುತ್ತಿದೆ. ಇನ್ನೂ ಸಭೆ ನಡೆಯುವ ಸ್ಥಳ, ಪ್ರಾದೇಶಿಕ ಆಯುಕ್ತರ ಸಭಾಂಗಣಕ್ಕೆ ಹೈಟೆಕ್ ಟಚ್ ನೀಡಲಾಗುತ್ತಿದೆ. ಟೇಬಲ್, ಮೈಕ್, ಎಸಿ ಸೇರಿದಂತೆ ಪ್ರತಿಯೊಂದು ವಸ್ತುಗಳನ್ನು ಹೊಸದಾಗಿ ನವೀಕರಣ ಮಾಡಲಾಗುತ್ತಿದೆ. ಇನ್ನು ದಶಕದ ಬಳಿಕ ಕ್ಯಾಬಿನೆಟ್ ಸಭೆ ಹಿನ್ನೆಲೆ ಆಡಳಿತ ಪಕ್ಷದ ಶಾಸಕರು ಕ್ಷೇತ್ರದ ಅಭಿವೃದ್ಧಿ ಪಟ್ಟಿಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ನೀಡಿದ್ದಾರೆ.