May 17, 2026
Sunday, May 17, 2026
spot_img

ಸಚಿವ ಸಂಪುಟ ಪುನರ್‌ರಚನೆ: ಅರಣ್ಯ ಸಚಿವ ಈಶ್ವರ ಖಂಡ್ರೆ ಅಚ್ಚರಿಯ ಹೇಳಿಕೆ!

ಹೊಸದಿಗಂತ ವರದಿ, ಮಂಗಳೂರು:

ಸಚಿವ ಸಂಪುಟ ಪುನರ್‌ರಚನೆ ಮಾಡುವುದು ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರ ಪರಮಾಧಿಕಾರ. ಯಾವುದೇ ಸಮಯಲ್ಲಿ ಸಂಪುಟ ಪುನರ್‌ರಚನೆ ಮಾಡಬಹುದು ಅಥವಾ ಮಾಡದೆಯೂ ಇರಬಹುದು. ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ನಾವೆಲ್ಲರೂ ಬದ್ದ. ನಮ್ಮಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮ ವತಿಯಿಂದ ನಗರದ ಕದ್ರಿಪಾರ್ಕ್‌ನಲ್ಲಿ ಏರ್ಪಡಿಸಿರುವ ಎರಡು ದಿನಗಳ ಗೇರು ಮೇಳಕ್ಕೆ ಚಾಲನೆ ನೀಡಿದ ವೇಳೆ ಸುದ್ದಿಗಾರರ ಜತೆ ಭಾನುವಾರ ಅವರು ಮಾತನಾಡಿದರು.

ಮುಂದೆಯೂ ನಾವೇ ಅಧಿಕಾರಕ್ಕೆ

ರಾಜ್ಯ ಸರಕಾರ ಭದ್ರವಾಗಿದೆ. ಉತ್ತಮ ಆಡಳಿತ ನೀಡಿದ್ದೇವೆ. ಇನ್ನೂ ಎರಡು ವರ್ಷ ಉತ್ತಮ ಆಡಳಿತ ನೀಡುತ್ತೇವೆ. ಜನಪರ, ಜೀವಪರ ಆಡಳಿತ ನೀಡಿದ ಕಾರಣವೇ ನಾವು ಎಲ್ಲ ಉಪಚುನಾವಣೆಯಲ್ಲಿ ಗೆದ್ದಿದ್ದೇವೆ. ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.

ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ

ನೀವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖಂಡ್ರೆ, ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಶಿಸ್ತಿನ ಸಿಪಾಯಿ. ಯಾವುದೇ ಜವಾಬ್ದಾರಿ ನೀಡಿದರೂ ಸಮರ್ಥವಾಗಿ ನಿಭಾಯಿಸಿದ್ದೇನೆ. ಈಗ ಯಾವುದೇ ಹುದ್ದೆ ಖಾಲಿ ಇಲ್ಲ. ಹೀಗಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಗೇರು ಬೆಳೆಗೆ ಪ್ರೋತ್ಸಾಹ ಅಗತ್ಯ

ಗೇರು ಅಭಿವೃದ್ಧಿ ನಿಗಮದ 48 ವರ್ಷದ ಇತಿಹಾಸದಲ್ಲಿ ಮೊದಲ ಬಾರಿ ಗೇರು ಮೇಳ ಆಯೋಜಿಸಲಾಗಿದೆ. ಗೋಡಂಬಿ ಉತ್ಪಾದನೆ ದಿನೇ ದಿನೇ ಕುಸಿಯುತ್ತಿದೆ. ನಮ್ಮ ದೇಶದಲ್ಲಿ ಗೇರು ಉತ್ಪನ್ನಗಳಿಗೆ ಬೇಡಿಕೆ ಇದೆ. ಗೇರು ಬೆಳೆಗೆ ಪ್ರೋತ್ಸಾಹ ನೀಡಬೇಕು. ಗೇರು ಉತ್ಪನ್ನಗಳನ್ನು ವಿದೇಶದಿಂದ ಆಮದು ಮಾಡಿಕೊಂಡು ವಿದೇಶಿ ವಿನಿಮಯವೂ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿಗಮದ ವತಿಯಿಂದ ಗೇರು ಬೆಳೆಗೆ ಪ್ರೋತ್ಸಾಹ ನೀಡಲು ಗೇರು ಮೇಳ ಆಯೋಜಿಸಲಾಗಿದೆ. ಗೇರು ಬೆಳೆಯಲ್ಲಿ ಇಳುವರಿ ಹೆಚ್ಚಿಸುವುದು, ಗೇರು ಸಂಸ್ಕರಣೆಗೆ ಪ್ರೋತ್ಸಾಹ, ವೈಜ್ಞಾನಿಕ ಗೇರು ಬೆಳೆಗೆ ಮಾಹಿತಿ, ಪರಿಸರ ಸ್ನೇಹಿ ಗೇರು ಬೆಳೆ ಪ್ರೋತ್ಸಾಹಿಸಲು ಎರಡು ದಿನಗಳ ಗೇರು ಮೇಳ ಆಯೋಜಿಸಲಾಗಿದೆ. ಕರಾವಳಿ ಭಾಗದಲ್ಲಿ ಗೇರು ಬೆಳೆಯಲು ಅರಣ್ಯ ಇಲಾಖೆಯಿಂದ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !