ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ ರಾಷ್ಟ್ರೀಯ ಹಾಕಿ ಪಟು ರಫೀಕ್

ಹೊಸ ದಿಗಂತ ವರದಿ, ಪೊನ್ನಂಪೇಟೆ:

ಹಾಕಿ ಆಟಗಾರನಾಗಿ ಚಿಕ್ಕ ವಯಸ್ಸಿನಲ್ಲೇ ವಿಶೇಷವಾಗಿ ಗಮನ ಸೆಳೆದಿದ್ದ ರಾಷ್ಟ್ರೀಯ ಹಾಕಿ ಪಟು ಮತ್ತು ಪ್ರಸ್ತುತ ಐ. ಓ.ಬಿ. ಹಾಕಿ ತಂಡದ ಆಟಗಾರ ವೀರಾಜಪೇಟೆಯ ಎಸ್. ಎಂ. ರಫೀಕ್ ಭಾನುವಾರ ವೈವಾಹಿಕ ಜೀವನಕ್ಕೆ ಪ್ರವೇಶಿಸಿದರು.
ಕುಶಾಲನಗರ ಸಮೀಪದ ಬೈಲುಕುಪ್ಪೆಯ ಜಾಮಿಯಾ ಮಸೀದಿಯಲ್ಲಿ ನಡೆದ ನಿಖಾ ಕಾರ್ಯಕ್ರಮದಲ್ಲಿ ಮೊಹಮ್ಮದ್ ದಸ್ತಗೀರ್ (ಬಾಬು) ದಂಪತಿಯ ಪುತ್ರಿ ಗುಲ್ಜಾರ್ ಬಾನು ಎಂಬವರನ್ನು ತಮ್ಮ ಬಾಳಸಂಗಾತಿಯಾಗಿ ಸ್ವೀಕರಿಸುವ ಮೂಲಕ ರಫೀಕ್ ಅವರು ಗೃಹಸ್ಥಾಶ್ರಮಕ ಪ್ರವೇಶಿಸಿದರು.
ಬಳಿಕ ಬೈಲುಕುಪ್ಪೆಯ ಎಸ್. ಎಲ್. ವಿ. ಕಲ್ಯಾಣ ಮಂಟಪದಲ್ಲಿ ನಡೆದ ವಿವಾಹ ಕಾರ್ಯದಲ್ಲಿ ಕರ್ನಾಟಕದ ಹಾಕಿ ದಿಗ್ಗಜರ ದಂಡೇ ನೆರೆದಿತ್ತು.
ವೀರಾಜಪೇಟೆಯ ಸುಭಾಷ್ ನಗರದ ಶೇಖ್ ಮುನಾವ್ವರ್ ಮತ್ತು ಸಲ್ಮಾ ದಂಪತಿಯ ಪುತ್ರರಾಗಿರುವ ಎಸ್.ಎಂ. ರಫೀಕ್ ಚಿಕ್ಕಂದಿನಿಂದಲೇ ಹಾಕಿ ಕ್ರೀಡೆಯತ್ತ ಒಲವಿದ್ದ ಕಾರಣ ಪೊನ್ನಂಪೇಟೆಯ ಸ್ಪೋರ್ಟ್ಸ್ ಹಾಸ್ಟೆಲ್’ಗೆ ಮೊದಲ ಪ್ರಯತ್ನದಲ್ಲಿ ಪ್ರವೇಶ ಪಡೆದು ಹಾಕಿ ಕ್ರೀಡೆಯನ್ನು ಮತ್ತಷ್ಟು ರೂಢಿಸಿಕೊಂಡರು. ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್’ನಿಂದ ಹೊರಬಂದ ಮೊದಲ ತಂಡದ ಸದಸ್ಯರಲ್ಲಿ ಒಬ್ಬರಾಗಿರುವ ಎಸ್.ಎಂ.ರಫೀಕ್, ಜಿಲ್ಲೆಯ ಹಿರಿಯ ಹಾಕಿ ತರಬೇತುದಾರ ವಿ.ಎಸ್. ರಾಮಚಂದ್ರ ಅವರ ಗರಡಿಯಲ್ಲಿ ಪಳಗಿದ ಹಾಕಿ ಪಟುವಾಗಿದ್ದಾರೆ.
ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ವಿದ್ಯಾರ್ಥಿಯಾಗಿ ತೋರಿದ ಅದ್ವಿತೀಯ ಸಾಧನೆಯಿಂದಾಗಿ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಕಿ ತಂಡಕ್ಕೆ ಆಯ್ಕೆಗೊಂಡ ರಫೀಕ್ ಅವರು, ತಮ್ಮಲ್ಲಿದ್ದ ಹಾಕಿ ಕ್ರೀಡಾ ಕೌಶಲ್ಯದ ಪರಿಣಾಮ ಪ್ರತಿಷ್ಠಿತ ಭಾರತ ಹಿರಿಯರ ಹಾಕಿ ತಂಡದ ಶಿಬಿರಕ್ಕೂ ಆಯ್ಕೆಗೊಂಡಿದ್ದರು.
ಏಳು ವರ್ಷಗಳ ಕಾಲ ಕರ್ನಾಟಕ ತಂಡವನ್ನು ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಪ್ರತಿನಿಧಿಸಿರುವ ರಫೀಕ್, 2011 ರಿಂದ ಸತತವಾಗಿ 3 ವರ್ಷಗಳ ಕಾಲ ರಾಷ್ಟ್ರೀಯ ಚಾಂಪಿಯನ್ ಶಿಪ್’ನಲ್ಲಿ ಪಾಲ್ಗೊಂಡಿದ್ದ ಹೆಗ್ಗಳಿಕೆ ಪಡೆದವರಾಗಿದ್ದಾರೆ.
2011ರಲ್ಲಿ ಭೂಪಾಲ್ ನಲ್ಲಿ ನಡೆದ ಹಿರಿಯರ ಹಾಕಿ ರಾಷ್ಟ್ರೀಯ ಚಾಂಪಿಯನ್ ಶಿಪ್’ನಲ್ಲಿ ಬೆಳ್ಳಿ ಪದಕ ಪಡೆದಿರುವ ರಫೀಕ್, 2012ರಲ್ಲಿ ಬೆಂಗಳೂರಿನಲ್ಲಿ ಮತ್ತು 2013ರಲ್ಲಿ ಪುಣೆಯಲ್ಲಿ ನಡೆದ ಹಿರಿಯರ ಹಾಕಿ ರಾಷ್ಟ್ರೀಯ ಚಾಂಪಿಯನ್ ಶಿಪ್ ಗಳಲ್ಲಿ ಕಂಚಿನ ಪದಕ ಪಡೆದಿದ್ದರು. ಪ್ರಸ್ತುತ ಇಂಡಿಯನ್ ಓವರ್’ಸೀಸ್ ಬ್ಯಾಂಕ್ (ಐ. ಓ. ಬಿ.) ಹಾಕಿ ತಂಡದ ಸಕ್ರಿಯ ಆಟಗಾರನಾಗಿರುವ ರಫೀಕ್, ಪ್ರಸ್ತುತ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ತಮ್ಮ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಭಾನುವಾರ ನಡೆದ ರಫೀಕ್ ಅವರ ವಿವಾಹ ಮಹೋತ್ಸವದಲ್ಲಿ ಒಲಂಪಿಯನ್ ವಿ.ಆರ್. ರಘುನಾಥ್, ಅಂತಾರಾಷ್ಟ್ರೀಯ ಹಾಕಿ ಪಟುಗಳಾದ ಕರಿನೆರವಂಡ ಸೋಮಣ್ಣ, ವಿಕ್ರಂಕಾಂತ್, ನಿತಿನ್ ತಿಮ್ಮಯ್ಯ, ಎಂ.ಬಿ. ಅಯ್ಯಪ್ಪ, ರಾಷ್ಟ್ರೀಯ ಹಾಕಿ ಆಟಗಾರರ ಕೆ.ಎಸ್. ಅಪ್ಪಣ್ಣ, ಚಿಂಗಪ್ಪ, ಶಾನ್, ಡಿ. ಎಂ. ದರ್ಶನ್ ಮೊದಲಾದವರು ಪಾಲ್ಗೊಂಡು ವಧು-ವರರಿಗೆ ಶುಭಕೋರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!