ಕೃಷಿ ಮಾಡಿ ಮಗನನ್ನು ಇಂಜಿನಿಯರಿಂಗ್ ಓದಿಸಿದ್ದ. ಮಗನೂ ಕೆಲಸ ಹುಡುಕಲು ಹೋದವನು ವಾಪಾಸ್ ಬರಲೇ ಇಲ್ಲ. ಆಗಾಗ ಫೋನ್ ಮಾಡಿ ಕೆಲಸ ಸಿಕ್ಕಿದೆ, ಫ್ರೆಂಡ್ ಜೊತೆ ರೂಂ ಮಾಡಿದ್ದೇನೆ ಎಂದೆಲ್ಲಾ ಹೇಳುತ್ತಿದೆ.
ಬರುಬರುತ್ತಾ ಮಗ ತುಂಬಾ ಬ್ಯುಸಿ ಆದ. ವಾರಕ್ಕೊಮ್ಮೆ ಮಾಡುತ್ತಿದ್ದ ಫೋನ್ ಇದೀಗ ತಿಂಗಳಿಗೊಮ್ಮೆ ಆಯ್ತು.
ಆಮೇಲೆ ಆರು ತಿಂಗಳಿಗೊಮ್ಮೆ. ಅಪ್ಪನೂ ಮಗನಿಗೆ ಕರೆ ಮಾಡಿ, ಮಾಡಿ ಬೇಸತ್ತು ಸುಮ್ಮನಾದ.
ಒಂದು ದಿನ ಯಾಕೋ ಅಪ್ಪನಿಗೆ ಮಗನನ್ನ ನೋಡಬೇಕು ಅನಿಸಿತ್ತು. ಅವನ ಎರಡು ವರ್ಷದ ಹಿಂದೆ ನೀಡಿದ್ದ ಅಡ್ರೆಸ್ ಚೀಟಿ ಕೈಯಲ್ಲಿ ಹಿಡಿದುಕೊಂಡು ಬಸ್ ಹತ್ತಿ ಹೊರಟೇ ಬಿಟ್ಟ. ಮನೆಗೆ ಹೋಗಿ ಬಾಗಿಲು ತಟ್ಟಿದಾಗ ಅದೇನೋ ಖುಷಿ, ಮಗನ ಮುಖ ನೋಡುವ ತವಕ.
ಆದರೆ ಬಾಗಿಲು ತೆರೆದಿದ್ದು ಬೇರೆ ಯಾರೋ ವ್ಯಕ್ತಿ, ನನ್ನ ಮಗ ಬೇಕಿತ್ತು ಎಂದು ಹೇಳಿದ. ಆತ ಬೇರೆ ಮನೆಗೆ ಹೋದ. ನನಗೆ ಎಲ್ಲಿ ಹೋದ ಗೊತ್ತಿಲ್ಲ ಎಂದ. ಅರಳಿದ ಮುಖ ಬಿಸಿ ತಾಗಿದ ಹೂವಿನಂತೆ ತಕ್ಷಣ ಬಾಡಿಹೋಯ್ತು.
ಪಕ್ಕದ ಮನೆಯವರು ನಿಮ್ಮ ಮಗ ಇಂಥ ಆಫೀಸಿನಲ್ಲಿ ಕೆಲಸ ಮಾಡ್ತಾನೆ, ಆಫೀಸ್ ಅಡ್ರೆಸ್ ತಗೊಳ್ಳಿ ಎಂದ್ರು. ಬಾಡಿದ್ದ ಮುಖ ಕೊಂಚ ನಿರಾಳ ಆಯ್ತು. ಮಗನನ್ನು ಹುಡುಕಿ ಆಫೀಸ್‌ಗೆ ಹೊರಟ. ಅಂತೆಯೇ ಮಗ ಸಿಕ್ಕ. ಎರಡು ವರ್ಷದ ನಂತರ ಇಬ್ಬರೂ ಒಬ್ಬರನೊಬ್ಬರು ನೋಡಿದ್ದು, ಕಡಿಮೆ ಮಾತು. ಮುಖದಲ್ಲಿ ಸಂತೋಷ ಎದ್ದು ಕಾಣುತ್ತಿತ್ತು. ಅಮ್ಮ ನಿನ್ನ ನೋಡಬೇಕು ಅಂತಿದ್ದಾಳೆ ಬಾ ಎಂದ.
ಅದಕ್ಕೆ ಮಗ, ಈ ತಿಂಗಳು ಆಗೋದೇ ಇಲ್ಲ. ನಾನು ತುಂಬಾ ಬ್ಯುಸಿ ಇದ್ದೇನೆ, ಮುಂದಿನ ತಿಂಗಳು ಬರುತ್ತೇನೆ ಎಂದ. ಅಪ್ಪ ಮತ್ತೆ ಮುಂದುವರಿದು, ಅಮ್ಮನಿಗೆ ಯಾಕೋ ಆರೋಗ್ಯ ಅಷ್ಟು ಚೆನ್ನಾಗಿಲ್ಲ ನೀನು ಬಂದರೆ ಅವಳಿಗೆ ಖುಷಿ ಎಂದ. ಮಗ, ಸ್ವಲ್ಪ ರೇಗಿದ ಧ್ವನಿಯಲ್ಲೇ ಮುಂದಿನ ತಿಂಗಳು ಬರ‍್ತೀನಪ್ಪ, ಈಗ ಆಗಲ್ಲ ಎಂದ.
ಅಪ್ಪ ಸರಿ ಎಂದು ಊರಿಗೆ ಹೊರಟ.
ಮಗ ಹೇಳಿದಂತೆಯೇ ತಿಂಗಳ ನಂತರ ಊರಿಗೆ ಬಂದ. ಆದರೆ ಅವನನ್ನು ನೋಡಿ ಖುಷಿ ಪಡಲು ಅಮ್ಮ ಬದುಕಿರಲಿಲ್ಲ!
ನಿಮ್ಮಿಂದ ನಿಮ್ಮ ಪೋಷಕರು ಏನು ನಿರೀಕ್ಷೆ ಮಾಡ್ತಾರೆ? ಕೈ ತುಂಬಾ ಹಣ? ಚಿನ್ನ? ಆಸ್ತಿ? ಖಂಡಿತಾ ಅಲ್ಲ. ಒಂಚೂರು ಸಮಯ ಅಷ್ಟೆ. ಪ್ರೀತಿಯ ನಾಲ್ಕು ಮಾತಷ್ಟೆ. ನೀವೆಷ್ಟೇ ಬ್ಯುಸಿ ಇರಬಹುದು. ಕೆಲಸ ಮುಖ್ಯ ಇರಬಹುದು. ಎಲ್ಲದಕ್ಕಿಂತ ಹೆತ್ತವರು ಮುಖ್ಯ. ಕೆಲಸ ಹೋದರೆ ಬಂದೀತು, ಆದರೆ ಅಪ್ಪ-ಅಮ್ಮ?