ದೆಹಲಿಗೆ ಕಂಟಕವಾಗುತ್ತಿದೆ ಕೋವಿಡ್: ಒಮಿಕ್ರಾನ್, ಪಾಸಿಟಿವಿಟಿ ದರ ಎಲ್ಲವೂ ದ್ವಿಗುಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಒಮಿಕ್ರಾನ್‌ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ಪರೀಕ್ಷಿಸಿದ 72 ಮಾದಿರಗಳಲ್ಲಿ 47 ಮಂದಿಗೆ ಒಮಿಕ್ರಾನ್‌ ಸೋಂಕು ತಗುಲಿರುವುದು ದೃಢಪಟ್ಟಿದೆ.
ಜ.1ರಿಂದ ಜ.3ರ ನಡುವಿನ ಕೋವಿಡ್ ಸೋಂಕಿತರ ಮಾದರಿಗಳಲ್ಲಿ ಶೇ.28ರಷ್ಟು ಮಂದಿಯಲ್ಲಿ ಒಮಿಕ್ರಾನ್‌ ರೂಪಾಂತರಿ ಪತ್ತೆಯಾಗಿದೆ. ಈ ವರ್ಷದ ಮೊದಲ ಮೂರು ದಿನದಲ್ಲಿ ಪರೀಕ್ಷಿಸಿದ 72 ಮಾದರಿಗಳಲ್ಲಿ 47 ಮಂದಿಗೆ ಒಮಿಕ್ರಾನ್‌ ಬಂದಿದ್ದು, 20 ಮಂದಿಗೆ ಡೆಲ್ಟಾ ಸೋಂಕು ಪತ್ತೆಯಾಗಿದೆ. ಶೇ.7ರಷ್ಟು ಮಂದಿಗೆ ಮಾತ್ರ ಇತರೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ನಿನ್ನೆ ಒಂದೇ ದಿನ ದೆಹಲಿಯಲ್ಲಿ 10,665 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಪಾಸಿಟಿವಿಟಿ ಪ್ರಮಾಣ ಕೂಡ ಶೇ.11.88ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಮಾತನಾಡಿದ್ದು, ರಾಜ್ಯದಲ್ಲಿ ಕೋವಿಡ್‌ ನ ಮೂರನೇ ಅಲೆ ಆರಂಭವಾಗಿದೆ. ಇದು ಒಮಿಕ್ರಾನ್‌ ಹರಡುವಿಕೆ ಹೆಚ್ಚಿಸಲು ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಡಿಸೆಂಬರ್‌ ನಲ್ಲಿ ಪರೀಕ್ಷಿಸಲಾದ 1,553 ಕೋವಿಡ್‌ ಮಾದರಿಗಳಲ್ಲಿ ಶೇ.28ರಷ್ಟು ಒಮಿಕ್ರಾನ್‌, ಶೇ.34ರಷ್ಟು ಡೆಲ್ಟಾ ಹಾಗೂ ಶೇ.38ರಷ್ಟು ಇತರ ಸೋಂಕು ಪತ್ತೆಯಾಗಿದ್ದರು.
ಇನ್ನು ಡಿಸೆಂಬರ್‌ ನ ಕೊನೆಯ ವಾರದಲ್ಲಿ 563 ಮಾದರಿಗಳಲ್ಲಿ ಶೇ.62ರಷ್ಟು ಒಮಿಕ್ರಾನ್‌ ಶೇ.22ರಷ್ಟು ಡೆಲ್ಟಾ ಹಾಗೂ ಶೇ.16ರಷ್ಟು ಇತರ ಸೋಂಕು ಪತ್ತೆಯಾಗಿದೆ.
ಕೋವಿಡ್‌ ಆಸ್ಪತ್ರೆಗಳಲ್ಲಿ ಮೀಸಲಿಟ್ಟಿರುವ 2ಸಾವಿರ ಹಾಸಿಗೆಗಳಲ್ಲಿ ಕೇವಲ 45 ಹಾಸಿಗೆಗಳು ಖಾಲಿ ಇವೆ. ಹಾಗಾಗಿ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್‌ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದ್ದು, ಅಲ್ಲಿನ ಶೇ.40ರಷ್ಟು ಹಾಸಿಗೆಗಳನ್ನು ಕೋವಿಡ್‌ ಗೆ ಬಳಸಲು ಸೂಚಿಸಲಾಗಿದೆ.
ಸೋಂಕು ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ವೀಕೆಂಡ್‌ ಕರ್ಫ್ಯೂ ಜಾರಿಗೊಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!