October 10, 2026
Saturday, October 10, 2026
spot_img

ಬೆಂಕಿ, ನೀರು ಒಂದಾಗಲು ಸಾಧ್ಯವೇ? ದ್ವಿಪಕ್ಷೀಯ ಸಂಬಂಧ ಹಾಳಾಗಲು ತೈವಾನ್ ಕಾರಣವಾಗುತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದ ಎರಡು ಬಲಿಷ್ಠ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾ ನಡುವೆ ತೈವಾನ್ ವಿಚಾರವಾಗಿ ಮತ್ತೊಮ್ಮೆ ತೀವ್ರ ವಾಕ್ಸಮರ ನಡೆದಿದೆ. ಬೀಜಿಂಗ್‌ನ ಐತಿಹಾಸಿಕ ‘ಗ್ರೇಟ್ ಹಾಲ್ ಆಫ್ ದಿ ಪೀಪಲ್’ನಲ್ಲಿ ನಡೆದ ದ್ವಿಪಕ್ಷೀಯ ಶೃಂಗಸಭೆಯಲ್ಲಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸಮ್ಮುಖದಲ್ಲೇ ಗಂಭೀರ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ಸಭೆಯಲ್ಲಿ ಮಾತನಾಡಿದ ಜಿನ್‌ಪಿಂಗ್, ಅಮೆರಿಕ ಮತ್ತು ಚೀನಾ ಸಂಬಂಧಗಳ ನಡುವೆ ತೈವಾನ್ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖವಾದ ವಿಷಯವಾಗಿದೆ. ಈ ಸಮಸ್ಯೆಯನ್ನು ಮುತ್ಸದ್ದಿತನದಿಂದ ನಿಭಾಯಿಸದಿದ್ದರೆ, ಉಭಯ ರಾಷ್ಟ್ರಗಳ ನಡುವೆ ನೇರ ಮಿಲಿಟರಿ ಸಂಘರ್ಷ ಅಥವಾ ಘರ್ಷಣೆ ಸಂಭವಿಸುವ ಸಾಧ್ಯತೆಯಿದೆ ಎಂದು ನೇರವಾಗಿ ತಿಳಿಸಿದರು.

ತೈವಾನ್‌ನ ಸ್ವಾತಂತ್ರ್ಯದ ಹಂಬಲ ಮತ್ತು ಆ ಪ್ರದೇಶದ ಶಾಂತಿ ಈ ಎರಡೂ ಅಂಶಗಳನ್ನು ಜಿನ್‌ಪಿಂಗ್ ‘ಬೆಂಕಿ ಮತ್ತು ನೀರು’ ಎಂದು ಹೋಲಿಸಿದ್ದಾರೆ. ಇವೆರಡೂ ಎಂದಿಗೂ ಜೊತೆಯಾಗಿರಲು ಸಾಧ್ಯವಿಲ್ಲ. ತೈವಾನ್ ತನ್ನ ಆಂತರಿಕ ವಿಷಯವಾಗಿದ್ದು, ಇದರಲ್ಲಿ ಅಮೆರಿಕ ಹಸ್ತಕ್ಷೇಪ ಮಾಡಬಾರದು ಎಂದು ಅವರು ಪ್ರತಿಪಾದಿಸಿದರು.

ಅಮೆರಿಕವು ತೈವಾನ್‌ಗೆ ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವುದನ್ನು ಚೀನಾ ತೀವ್ರವಾಗಿ ಖಂಡಿಸಿದೆ. ಈ ಒಪ್ಪಂದಗಳು ದ್ವಿಪಕ್ಷೀಯ ಸಂಬಂಧಗಳನ್ನು ಅಪಾಯಕಾರಿ ಸ್ಥಿತಿಗೆ ತಳ್ಳಬಹುದು. ಒಂದು ವೇಳೆ ಅಮೆರಿಕ ಈ ವಿಚಾರದಲ್ಲಿ ತಪ್ಪು ಹೆಜ್ಜೆ ಇಟ್ಟರೆ, ಜಾಗತಿಕ ಆರ್ಥಿಕತೆ ಮತ್ತು ಶಾಂತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಜಿನ್‌ಪಿಂಗ್ ಎಚ್ಚರಿಸಿದ್ದಾರೆ.

ಸಂಘರ್ಷಕ್ಕಿಂತ ಸಹಕಾರ ಮುಖ್ಯ ಎಂದು ಅಭಿಪ್ರಾಯಪಟ್ಟ ಜಿನ್‌ಪಿಂಗ್, ಚೀನಾ ಮತ್ತು ಅಮೆರಿಕ ಪರಸ್ಪರ ಸ್ಪರ್ಧಿಗಳಾಗುವ ಬದಲು ಪಾಲುದಾರರಾಗಬೇಕು. ತೈವಾನ್ ವಿಚಾರವನ್ನು ಗೌರವಯುತವಾಗಿ ನಿಭಾಯಿಸಿದರೆ ಮಾತ್ರ ಉಭಯ ದೇಶಗಳ ಸಂಬಂಧ ಸ್ಥಿರವಾಗಿರಲು ಸಾಧ್ಯ ಎಂದು ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ.

Must Read