ಮರ ಬಿದ್ದು ಕಾರು, ಬೈಕ್ ಜಖಂ: ಕೂದಲೆಳೆ ಅಂತರದಲ್ಲಿ ಪಾರಾದ ಸವಾರ

ಹೊಸದಿಗಂತ ವರದಿ,ಚಿತ್ರದುರ್ಗ :

ಜೋರಾಗಿ ಬೀಸಿದ ಗಾಳಿಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮರವೊಂದು ಕಾರು ಹಾಗೂ ಬೈಕಿನ ಮೇಲೆ ಬಿದ್ದು ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಪಾರಾಗಿದ್ದಾನೆ.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಮರವು ರಸ್ತೆಗೆ ಚಾಚಿಕೊಂಡಿದ್ದು ಗಾಳಿ ಬೀಸಿದ ರಭಸಕ್ಕೆ ಮುರಿದು ರಸ್ತೆಗೆ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಪಲ್ಸರ್ ಬೈಕಿನ ಟ್ಯಾಂಕ್ ಸಂಪೂರ್ಣ ಜಖಂ ಆಗಿದೆ. ಆದರೆ, ಕಾರಿಗೆ ಯಾವುದೇ ತೊಂದರೆ ಆಗಿರಲಿಲ್ಲ. ಬೈಕ್ ಸವಾರ ಚಲಿಸುತ್ತಿದ್ದ ವೇಳೆಯೇ ಮರ ಬಿದ್ದಿದ್ದು, ಕ್ಷಣಮಾತ್ರದಲ್ಲಿ ಬೈಕ್ ಸವಾರ ಪಾರಾಗಿದ್ದಾನೆ.

ನಗರ ಪೊಲೀಸ್ ಠಾಣೆ ಎದುರಿಗೆ ಬಾಲಕಿಯರ ಪದವಿ ಪೂರ್ವ ಕಾಲೇಜು ಕಾಂಪೌಂಡ್ ಪಕ್ಕದಲ್ಲಿ ನಿಂತಿದ್ದ ಕಾರಿನ ಮೇಲೆ ಮರ ಬಿದ್ದಿದ್ದರೂ ಕಾರಿಗೆ ಹಾನಿಯಾಗಿರಲಿಲ್ಲ. ಮರದ ದಪ್ಪನೆ ತುಂಡುಗಳು ಕಾರಿನ ಪಕ್ಕದಲ್ಲಿದ್ದರೆ ಕಾರಿನ ಮೇಲೆ ಸಣ್ಣಪುಟ್ಟ ರೆಂಬೆ, ಕೊಂಬೆಗಳು, ಸೊಪ್ಪು ಮುಚ್ಚಿಕೊಂಡಿತ್ತು.
ಸ್ಥಳಕ್ಕೆ ಪೊಲೀಸರು ಆಗಮಿಸಿ, ಕಾರು ತೆರವುಗೊಳಿಸಿ ಮರವನ್ನು ಪಕ್ಕಕ್ಕೆ ಹಾಕಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!