ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದ ಕಾಂಗ್ರೆಸ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರವಾಗಿ ಹರಿಹಾಯ್ದಿದ್ದಾರೆ.
ವಿರೋಧ ಪಕ್ಷ ಕಾಂಗ್ರೆಸ್ ‘ಒಂದು ನಿರ್ದಿಷ್ಟ ಕುಟುಂಬವನ್ನು ಅಧಿಕಾರದಲ್ಲಿ ಉಳಿಸಿಕೊಳ್ಳಲು’ ಸಂವಿಧಾನದ ಆಶಯವನ್ನು ಹಲವಾರು ಬಾರಿ ಛಿದ್ರಗೊಳಿಸಿದೆ ಎಂದು ಹೇಳಿದ್ದಾರೆ.
1975ರ ತುರ್ತು ಪರಿಸ್ಥಿತಿಯ 49ನೇ ವಾರ್ಷಿಕೋತ್ಸವದಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಯುವರಾಜ ಎಂದಿದ್ದಾರೆ. ರಾಹುಲ್ ಗಾಂಧಿಯ ಅಜ್ಜಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ರಾಹುಲ್ ಗಾಂಧಿಯ ತಂದೆ ರಾಜೀವ್ ಗಾಂಧಿ 1985ರ ಜುಲೈ 23ರಂದು ‘ತುರ್ತು ಪರಿಸ್ಥಿತಿಯಲ್ಲಿ ಯಾವುದೇ ತಪ್ಪಿಲ್ಲ’ ಎಂದು ಸಂಸತ್ತಿನಲ್ಲಿ ಹೇಳಿದ್ದರು ಎಂದು ಅಮಿತ್ ಶಾ ಆಕ್ರೋಶ ಹೊರಹಾಕಿದ್ದಾರೆ.
‘ಒಂದು ನಿರ್ದಿಷ್ಟ ಕುಟುಂಬವನ್ನು ಅಧಿಕಾರದಲ್ಲಿ ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ನಮ್ಮ ಸಂವಿಧಾನದ ಆಶಯವನ್ನು ಹಲವಾರು ಬಾರಿ ಪುಡಿ ಮಾಡಿತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು ಭಾರತದ ಜನರ ಮೇಲೆ ನಿರ್ದಯ ದೌರ್ಜನ್ಯಗಳನ್ನು ಮಾಡಿದರು’ ಎಂದು ಅಮಿತ್ ಶಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜೀವ್ ಗಾಂಧಿ ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಂಡಿದ್ದರು. ಈ ದೇಶದ ಯಾವುದೇ ಪ್ರಧಾನಿ ತುರ್ತು ಪರಿಸ್ಥಿತಿ ಅಗತ್ಯವಿದೆ ಎಂದು ಭಾವಿಸಿದರೆ ಅವರು ಈ ದೇಶದ ಪ್ರಧಾನಿಯಾಗಲು ಯೋಗ್ಯರಲ್ಲ. ಸರ್ವಾಧಿಕಾರದ ಬಗ್ಗೆ ಹೆಮ್ಮೆ ಪಡುವ ಕ್ರಮವು ಕಾಂಗ್ರೆಸ್ಗೆ ರೂಢಿಯಾಗಿದೆ ಎಂದು ಅಮಿತ್ ಶಾ ಟೀಕಿಸಿದ್ದಾರೆ.