ಹೊಸ ದಿಗಂತ ವರದಿ,ಚಿತ್ರದುರ್ಗ:
ನಿಂತಿದ್ದ ಲಾರಿಯ ಹಿಂಬದಿಗೆ ಇನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಐದು ಜನರು ಸ್ಥಳದಲ್ಲೇ ದಾರುಣ ಅಂತ್ಯ ಕಂಡಿರುವ ಘಟನೆ ನಗರದ ಹೊರವಲಯದ ನೂತನ ಹೆದ್ದಾರಿಯಲ್ಲಿನ ಸೇತುವೆ ಬಳಿ ಭಾನುವಾರ ಸಂಭವಿಸಿದೆ.
ಮೃತರನ್ನು ಎನ್.ಎಸ್.ರುದ್ರಸ್ವಾಮಿ, ಚಂದ್ರಹಾಸ, ಶಾಂತಮೂರ್ತಿ, ಶ್ರೀನಿವಾಸ, ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೆಂಗಳೂರು ಮೂಲದವರಾಗಿದ್ದು, ಉತ್ತರ ಕರ್ನಾಟಕ ಪ್ರವಾಸ ಮುಗಿಸಿ ಇನೋವಾ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡಿರುವ ಚಿದಂಬರಾಚಾರ್ ಎಂಬುವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಪಘಾತದ ನಡೆದ ಬಳಿಕ ಕಾರಿನಲ್ಲಿ ಸಿಕ್ಕಿಕೊಂಡಿದ್ದ ಮೃತ ದೇಹಗಳನ್ನು ಸುತ್ತಮುತ್ತಲಿನ ಗ್ರಾಮಸ್ಥರ ಸಹಾಯದಿಂದ ಹೊರತೆಗೆದು ಶವಾಗಾರಕ್ಕೆ ಸಾಗಿಸಲಾಯಿತು. ಗ್ರಾಮಾಂತರ ಠಾಣೆ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.