ನೀಟ್​ ನಲ್ಲಿ ಒಳ ಉಡುಪು ತೆಗೆದಿಟ್ಟ ಪ್ರಕರಣ: ವಿದ್ಯಾರ್ಥಿನಿಯರಿಗೆ ಮರು ಪರೀಕ್ಷೆಗೆ ಅವಕಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈ ಬಾರಿ ನಡೆದ ನೀಟ್​ ಪರೀಕ್ಷೆಯ ಸಮಯದಲ್ಲಿ ಹಲವು ವಿದ್ಯಾರ್ಥಿನಿಯರಿಗೆ ಒಳ ಉಡುಪು ತೆಗೆದಿಟ್ಟು ಬರೆಯುವಂತೆ ಹೇಳಿದ್ದ ಘಟನೆ ನಡೆದಿತ್ತು. ಇದರಿಂದ ಮುಜುಗರ ಹಲವು ವಿದ್ಯಾರ್ಥಿನಿಯರು ಸರಿಯಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ, ಈ ಘಟನೆಯಿಂದ ವಿದ್ಯಾರ್ಥಿನಿಯರು ಶಾಕ್​ಗೆ ಒಳಗಾಗಿದ್ದರು. ಎಲ್ಲರ ಎದುರೇ ತಮ್ಮ ಮರ್ಯಾದೆ ಹೋಗಿದ್ದರಿಂದ ಪರೀಕ್ಷೆ ಬರೆದರೂ ಅದನ್ನು ಸರಿಯಾಗಿ ಬರೆಯಲು ಸಾಧ್ಯವಾಗಿರಲಿಲ್ಲ.

ಅದರಲ್ಲಿಯೂ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನೀಟ್ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯರಿಗೆ ಇಂಥದ್ದೊಂದು ತೊಂದರೆ ಎದುರಾಗಿತ್ತು. ಇದೀಗ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‍ಟಿಎ) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ವಿದ್ಯಾರ್ಥಿನಿಯರಿಗೆ ಮತ್ತೊಂದು ಅವಕಾಶವನ್ನು ಕಲ್ಪಿಸಿದೆ.

ಬರುವ ಸೆಪ್ಟೆಂಬರ್ 4 ರಂದು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು ಎಂದು ಎನ್​ಟಿಎ ಹೇಳಿದೆ. ಈಗಾಗಲೇ ವಿದ್ಯಾರ್ಥಿನಿಯರಿಗೆ ಎನ್‍ಟಿಎ ಇಮೇಲ್ ಕೂಡ ಕಳುಹಿಸಿದೆ.

ತಮ್ಮ ಪುತ್ರಿಗೆ ಆದ ಅವಮಾನವನ್ನು ವ್ಯಕ್ತಿಯೊಬ್ಬರು ಕೊಟ್ಟಾರಕರ ಪೊಲೀಸರಲ್ಲಿ ದೂರಿದ್ದರು. ಚಾತಮಂಗಲಂನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ತಮ್ಮ ಮಗಳು ಸೇರಿದಂತೆ ಮಹಿಳಾ ನೀಟ್ ಆಕಾಂಕ್ಷಿಗಳು ತಮ್ಮ ಒಳ ಉಡುಪು ತೆಗೆಯುವಂತೆ ಹೇಳಿದ್ದಾರೆ ಎಂದು ಆರೋಪಿಸಿದ್ದರು.

ಈ ಘಟನೆ ಭಾರಿ ವಿವಾದ ಸೃಷ್ಟಿಸಿತ್ತು. ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಮತ್ತು 509 ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿತ್ತು.

ನಂತರ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದರು. ಬಂಧಿತರಲ್ಲಿ ನೀಟ್ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದ ಇಬ್ಬರು ಕಾಲೇಜು ಸಿಬ್ಬಂದಿ ಮತ್ತು ಕೇಂದ್ರದ ಭದ್ರತೆಯನ್ನು ವಹಿಸಿಕೊಂಡಿದ್ದ ಏಜೆನ್ಸಿಯ ಮೂವರು ಸೇರಿದ್ದಾರೆ. ಕೊನೆಗೆ ಎಲ್ಲಾ ಆರೋಪಿಗಳಿಗೂ ಜಾಮೀನು ಸಿಕ್ಕಿದೆ. ಘಟನೆಯಿಂದ ವಿದ್ಯಾರ್ಥಿನಿಯರು ನೊಂದುಕೊಂಡಿರುವ ಹಿನ್ನೆಲೆಯಲ್ಲಿ ಇನ್ನೊಂದು ಅವಕಾಶ ಕಲ್ಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!