ಪ್ರಚೋದನಕಾರಿ ಭಾಷಣ: ನಟಿ ಶ್ರುತಿ ವಿರುದ್ದ ದಾಖಲಾಯ್ತು ದೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕಳೆದ ವಾರ ಹಾವೇರಿ ಜಿಲ್ಲೆಯ ಹಿರೇಕೇರೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದ ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್ ಕುಟುಂಬ ರಾಜಕಾರಣದ ವಿರುದ್ಧ ಮಾತನಾಡಿದ ಆರೋಪದ ಹಿನ್ನೆಲೆಯಲ್ಲಿ ಚಿತ್ರನಟಿ ಶೃತಿ ವಿರುದ್ಧ ದೂರು ದಾಖಲಿಸಲಾಗಿದೆ.

ಕಳೆದ ವಾರದ ಹಿಂದೆ ಹಿರೆಕೇರೂರಿನಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ನಟಿ ಶೃತಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ನಾಲಿಗೆ ಹರಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕಲಂ 505 ರಡಿ ಹಿರೆಕೇರೂರು ಪೊಲೀಸ್‌ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಅಬ್ಬರದ ಭಾಷಣ ಮಾಡಿದ್ದ ನಟಿ ಶೃತಿ

ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶಕ್ಕೆ ಮಾಜಿ ಸಚಿವ ಬಿ.ಸಿ ಪಾಟೀಲ್ ಪರ ಪ್ರಚಾರ ಮಾಡಲು ನಟಿ ಶೃತಿಯವರು ಆಗಮಿಸಿದ್ದರು. ಈ ವೇಳೆ ಭಾಷಣ ಮಾಡಿದ್ದ ಅವರು ‘ಯಾವುದೇ ಬೇರೆ ಪಕ್ಷದ ಬಗ್ಗೆ ನಾನು ಜಾಸ್ತಿ ಮಾತನಾಡಲ್ಲ. ಆದರೆ ಒಂದೆ ಮಾತಿನಲ್ಲಿ ಹೇಳಿ ಮುಗಿಸಿಬಿಡುತ್ತೇನೆ. ನಿಮ್ಮ ವಂಶ ಬಿಟ್ಟು ಬೇರೆಯವರ ವಂಶ ಅಭಿವೃದ್ದಿ ಆಗಬೇಕಾದ್ರೆ ಜೆಡಿಎಸ್​ಗೆ ಮತ ಹಾಕಿ. ನಿಮ್ಮ ವಂಶ ಬಿಟ್ಟು ಹೊರದೇಶದ ವಂಶ ಅಭಿವೃದ್ಧಿ ಆಗಬೇಕಾದರೆ ಕಾಂಗ್ರೆಸ್​ಗೆ ಮತ ಹಾಕಿ. ಭಾರತದಲ್ಲಿ ಭಾರತೀಯರ ವಂಶ ಅಭಿವೃದ್ಧಿ ಆಗಬೇಕಾದರೆ ಭಾರತೀಯ ಜನತಾ ಪಾರ್ಟಿಗೆ ಮತ ಹಾಕಿʼ ಎಂದಿದ್ದರು.

ಇದೇ ಹೇಳಿಕೆ ಸಂಬಂಧ ಇದೀಗ ನಟಿ ಶೃತಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಹಿರೆಕೇರೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!