Sunday, June 4, 2023

Latest Posts

ಯತ್ನಾಳಗೆ ಬೇರೆಡೆ ಕಳಿಸಿ, ತಮಗೆ ಟಿಕೆಟ್ ನೀಡಬೇಕೆಂದು ಮಾಜಿ ಸಚಿವ ಪಟ್ಟಣ ಶೆಟ್ಟಿ ಪಟ್ಟು

ಹೊಸದಿಗಂತ ವರದಿ ವಿಜಯಪುರ:

ನಗರ ಮತಕ್ಷೇತ್ರಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಬಿಜೆಪಿ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಅಸಮಾಧಾನ ಹೊರಬಿದ್ದಿದ್ದು, ಯತ್ನಾಳಗೆ ಬೇರೆ ಕ್ಷೇತ್ರಕ್ಕೆ ಕಳಿಸಿ, ತಮಗೆ ವಿಜಯಪುರ ನಗರ ಕ್ಷೇತ್ರಕ್ಕೆ ಟಿಕೆಟ್ ನೀಡಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್‌ಗೆ ಬ್ಲ್ಯಾಕ್‌ಮೇಲ್‌ ಮಾಡಿ ಯತ್ನಾಳ್ ಟಿಕೆಟ್ ತಂದಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಪುತ್ರನಿಗೂ ಬ್ಲ್ಯಾಕ್‌ಮೇಲ್‌ ಮೇಲ್ ಮಾಡಿದ್ದರು. ಆ ಕ್ಷೇತ್ರಗಳಲ್ಲಿ ತಮ್ಮ ಸಮಾಜದ, ಪಂಚಮಸಾಲಿ ಮತದಾರರು 50 ಸಾವಿರ ಜನ ಇದ್ದಾರೆ ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ದರು ಎಂದು ಆರೋಪಿಸಿದರು.

ಮೊನ್ನೆ ಪಕ್ಷದ ವತಿಯಿಂದ ನಡೆದ ನಾಯಕರ ಆಯ್ಕೆ ವೇಳೆ, ನನ್ನ ಪರವಾಗಿ ಕಾರ್ಯಕರ್ತರು, ಪದಾಧಿಕಾರಿಗಳು ಓಟ್ ಮಾಡಿದ್ದರೂ ಟಿಕೆಟ್ ಸಿಕ್ಕಿಲ್ಲ. ಈ ನಿರೀಕ್ಷೆ ಸುಳ್ಳಾಗಿದೆ. ಯತ್ನಾಳ್‌ಗೆ ಬೇರೆ ಕ್ಷೇತ್ರಕ್ಕೆ ಕಳುಹಿಸಿ, ನನಗೆ ನಗರ ಕ್ಷೇತ್ರದ ಟಿಕೆಟ್ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಮೀಸಲು ಕ್ಷೇತ್ರ ಹೊರತು ಪಡಿಸಿ ಮೂರು ಕ್ಷೇತ್ರಗಳು ಇನ್ನು ಬಾಕಿ ಉಳಿದಿವೆ. ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ಕ್ಷೇತ್ರ ಖಾಲಿ ಇವೆ. ಬೇರೆ ಕಡೆಗೆ ಯತ್ನಾಳಗೆ ಕಳುಹಿಸಿ ನನಗೆ ಟಿಕೆಟ್ ನೀಡಬೇಕು ಎಂದರು.

ಇಲ್ಲದಿದ್ದರೆ ಎರಡು ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ. ಕಾರ್ಯಕರ್ತರು, ಬೆಂಬಲಿಗರ ಸಭೆ ಕರೆದು ನಿರ್ಧಾರ ಮಾಡುವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!