ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮಾದಕ ದ್ರವ್ಯಗಳ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಚೆನ್ನೈನ ಮರೀನಾ ಬೀಚ್‌ನಲ್ಲಿ ಆಯೋಜಿಸಿದ್ದ ಬೃಹತ್ ಮ್ಯಾರಥಾನ್‌ನಲ್ಲಿ ಬರೋಬ್ಬರಿ ಆರು ಕಿಲೋಮೀಟರ್ ಓಡಿ ಎಲ್ಲರ ಗಮನ ಸೆಳೆದಿದ್ದಾರೆ.
‘Start Run, Stop Drugs’ ಎಂಬ ಘೋಷಣೆಯಡಿ ನಡೆದ ಈ ಅಭಿಯಾನದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಯುವಕರು ಹಾಗೂ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾದಕ ದ್ರವ್ಯ ಸೇವನೆ ಮಾಡದಿರಲು ಎಲ್ಲರಿಂದ ಪ್ರತಿಜ್ಞೆ ಬೋಧಿಸಿದ ಬಳಿಕ ವಿಜಯ್ ದಿಢೀರ್ ವೇದಿಕೆಯಿಂದ ಇಳಿದು ಸ್ಪರ್ಧಿಗಳೊಂದಿಗೆ ಓಡಲು ಆರಂಭಿಸಿದರು. ಕ್ರೀಡಾ ಉಡುಪಿನಲ್ಲಿ ಕಾಣಿಸಿಕೊಂಡ ಮುಖ್ಯಮಂತ್ರಿ ವಿಜಯ್ ಯಾವುದೇ ವಿರಾಮವಿಲ್ಲದೆ ಬರೋಬ್ಬರಿ 6 ಕಿಲೋ ಮೀಟರ್ ಓಟವನ್ನು ಪೂರ್ಣಗೊಳಿಸಿದರು. ಯುವಜನತೆಗೆ ಆರೋಗ್ಯಕರ ಜೀವನಶೈಲಿ ಹಾಗೂ ಮಾದಕ ವ್ಯಸನದ ವಿರುದ್ಧ ಹೋರಾಟದ ಸಂದೇಶ ನೀಡುವ ಉದ್ದೇಶದಿಂದ ಅವರು ಸ್ವತಃ ಓಟದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮ್ಯಾರಥಾನ್‌ನಲ್ಲಿ ಪಾಲ್ಗೊಂಡ ಸಾವಿರಾರು ಯುವಕರು, ‘ನಾವು ಎಂದಿಗೂ ಮಾದಕ ದ್ರವ್ಯ ಸೇವಿಸುವುದಿಲ್ಲ. ವ್ಯಸನಕ್ಕೊಳಗಾದವರನ್ನು ಅದರಿಂದ ಹೊರತರಲು ಸಹಕರಿಸುತ್ತೇವೆ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುತ್ತೇವೆ’ ಎಂದು ಪ್ರತಿಜ್ಞೆ ಸ್ವೀಕರಿಸಿದರು.
ಇದನ್ನೂ ಓದಿ:
ಪಿಟಿಐ ವರದಿ ಪ್ರಕಾರ, ಸಾರ್ವಜನಿಕ ಜಾಗೃತಿ ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳು ಮತ್ತು ಯುವಕರೊಂದಿಗೆ 6 ಕಿ.ಮೀ. ದೂರ ಓಡಿದ ಮೊದಲ ಹಾಲಿ ತಮಿಳುನಾಡು ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ವಿಜಯ್ ಪಾತ್ರರಾಗಿದ್ದಾರೆ.



