August 10, 2026
Monday, August 10, 2026
spot_img

ಉಚಿತ ವಿದ್ಯುತ್‌ಗೆ ಜಾತಿ ಪ್ರಮಾಣ ಪತ್ರ, ಪ್ಯಾನ್ ಕಾರ್ಡ್ ಬೇಕೇ? ಟ್ವಿಟರ್‌ನಲ್ಲಿ ಜೆಡಿಎಸ್ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಜ್ಯೋತಿ’ ಯೋಜನೆಗೆ ಹೊಸ ಷರತ್ತುಗಳನ್ನು ವಿಧಿಸಲಾಗುತ್ತಿದೆ ಎಂಬ ವಿಚಾರ ಈಗ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಈ ಕುರಿತು ಟ್ವಿಟರ್ ಮೂಲಕ ಕಿಡಿಕಾರಿರುವ ಜೆಡಿಎಸ್, “ಯಾವುದೇ ಷರತ್ತುಗಳಿಲ್ಲದೆ ಉಚಿತ ವಿದ್ಯುತ್ ನೀಡುವುದಾಗಿ ಭಾಷಣ ಬಿಗಿದು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈಗ ಬೊಕ್ಕಸ ಖಾಲಿ ಮಾಡಿಕೊಂಡು ಆರ್ಥಿಕ ದಿವಾಳಿತನ ಮುಚ್ಚಿಕೊಳ್ಳಲು ಕುತಂತ್ರ ನಡೆಸುತ್ತಿದೆ” ಎಂದು ಗಂಭೀರ ಆರೋಪ ಮಾಡಿದೆ.

ದಾಖಲೆಗಳ ಹೆಸರಲ್ಲಿ ಬಡವರಿಗೆ ನಾಮ? ಜೆಡಿಎಸ್ ಪ್ರಶ್ನೆ

ಮನೆ-ಮನೆ ಪರಿಶೀಲನೆ ನೆಪದಲ್ಲಿ ಎಸ್ಕಾಂ ಅಧಿಕಾರಿಗಳು ಬಡ ಹಾಗೂ ಮಧ್ಯಮ ವರ್ಗದ ಜನರನ್ನು ದಾಖಲೆಗಳ ಹೆಸರಿನಲ್ಲಿ ಬೆದರಿಸುತ್ತಿದ್ದಾರೆ ಎಂದು ಜೆಡಿಎಸ್ ದೂರಿದೆ. “ಉಚಿತ ವಿದ್ಯುತ್ ಪಡೆಯಲು ಪ್ಯಾನ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರದ ಅಗತ್ಯವೇನಿದೆ? ಕರ್ನಾಟಕದ ನಿವಾಸಿ ಎಂದು ದೃಢೀಕರಿಸಲು ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಸಾಕಾಗುವುದಿಲ್ಲವೇ? ಕಳ್ಳಮಾರ್ಗದಲ್ಲಿ ಫಲಾನುಭವಿಗಳ ಸಂಖ್ಯೆ ಕಡಿತಗೊಳಿಸುವುದೇ ಸರ್ಕಾರದ ಉದ್ದೇಶ” ಎಂದು ಜೆಡಿಎಸ್ ಪ್ರಶ್ನಿಸಿದೆ.

ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ

ವಿಪಕ್ಷಗಳ ಈ ತೀವ್ರ ಆರೋಪಗಳಿಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಇಂಧನ ಸಚಿವ ಕೆ.ಜೆ. ಜಾರ್ಜ್, ಗೃಹ ಜ್ಯೋತಿ ಯೋಜನೆಗೆ ಯಾವುದೇ ಹೊಸ ಕಠಿಣ ನಿಯಮಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾವು ಕೇವಲ ಅರ್ಹರಲ್ಲದವರನ್ನು ಮಾತ್ರ ಪರಿಷ್ಕರಣೆ ಮಾಡುತ್ತಿದ್ದೇವೆ. ಅರ್ಹ ಫಲಾನುಭವಿಗಳಿಗೆ ಯೋಜನೆ ಮುಂದುವರಿಯಲಿದೆ. ಗೃಹಜ್ಯೋತಿಗೆ ಜಾತಿ ಪ್ರಮಾಣ ಪತ್ರದ ಅಗತ್ಯವಿಲ್ಲ, ಅರ್ಜಿಯ ಕಾಲಂನಲ್ಲಿ ಜಾತಿ ಹೆಸರು ಬರೆದರೆ ಸಾಕು. ವಿರೋಧ ಪಕ್ಷದವರು ಅರ್ಜಿ ಫಾರಂ ನೋಡದೆಯೇ ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !