July 1, 2026
Wednesday, July 1, 2026
spot_img

ಭಾರತದ ಪರ ಪೋಲಿಷ್ ಮಹಿಳೆ ಭರ್ಜರಿ ಬ್ಯಾಟಿಂಗ್: ಜಾಗತಿಕ ದ್ವಂದ್ವ ನೀತಿ ವಿರುದ್ಧ ಪಾಶ್ಚಾತ್ಯರಿಗೆ ಸಖತ್ ಕ್ಲಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಯುರೋಪ್‌ನಲ್ಲಿ ಬಿಸಿಗಾಳಿ ತೀವ್ರಗೊಂಡಿರುವ ಬೆನ್ನಲ್ಲೇ ಭಾರತ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಅನುಸರಿಸಲಾಗುತ್ತಿರುವ ದ್ವಂದ್ವ ಧೋರಣೆ ಕುರಿತು ಪೋಲೆಂಡ್ ಮೂಲದ ಮಹಿಳೆಯೊಬ್ಬರು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.


ಭಾರತದಲ್ಲೇ ವಾಸವಾಗಿರುವ ಅವರು, ಬಿಸಿಗಾಳಿಯ ವಿಚಾರದಲ್ಲಿ ಭಾರತವನ್ನು ಟೀಕಿಸುವ ರೀತಿಯನ್ನೂ, ಯುರೋಪ್‌ಗೆ ತೋರಿಸಲಾಗುತ್ತಿರುವ ಸಹಾನುಭೂತಿಯನ್ನೂ ಪ್ರಶ್ನಿಸಿದ್ದಾರೆ. ಭಾರತದಲ್ಲಿ ತೀವ್ರ ಬಿಸಿಲು ಬಿದ್ದರೆ ಅದು ದೇಶದ ವೈಫಲ್ಯದಂತೆ ಬಿಂಬಿಸಲಾಗುತ್ತದೆ. ಆದರೆ ಅದೇ ಪರಿಸ್ಥಿತಿ ಯುರೋಪ್‌ನಲ್ಲಿ ಎದುರಾದಾಗ ಅದನ್ನು ಮಾನವೀಯ ದುರಂತದಂತೆ ನೋಡಲಾಗುತ್ತದೆ. ಈ ದ್ವಂದ್ವ ಧೋರಣೆ ಏಕೆ? ಎಂದು ಅವರು ಪ್ರಶ್ನಿಸಿದ್ದಾರೆ.

https://www.instagram.com/reel/DaM1vh-NnoU/?utm_source=ig_embed&ig_rid=AX-vb1_kyZxoi3MEt-kLtP8


ಪ್ರಸ್ತುತ ಯುರೋಪ್‌ನ ಹಲವು ಭಾಗಗಳಲ್ಲಿ ತಾಪಮಾನ ಏರಿಕೆಯಿಂದ ಶಾಲೆಗಳು ಮುಚ್ಚುವುದು, ಸಾರ್ವಜನಿಕ ಚಟುವಟಿಕೆಗಳಿಗೆ ನಿರ್ಬಂಧ, ರಸ್ತೆ ಮತ್ತು ರೈಲು ಮೂಲಸೌಕರ್ಯಗಳ ಮೇಲೆ ಪರಿಣಾಮ, ವಿದ್ಯುತ್ ಬಳಕೆ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಈ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, ಭಾರತದಲ್ಲಿ ಇಂತಹ ಪರಿಸ್ಥಿತಿಗಳು ವರ್ಷಗಳಿಂದ ಸಾಮಾನ್ಯವಾಗಿದ್ದರೂ ಜಾಗತಿಕ ಮಟ್ಟದಲ್ಲಿ ಅದರ ಬಗ್ಗೆ ಅನುಕಂಪಕ್ಕಿಂತ ಹೆಚ್ಚಾಗಿ ಟೀಕೆಗಳೇ ಕೇಳಿಬರುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.


ಭಾರತದ ಅನೇಕ ಭಾಗಗಳಲ್ಲಿ 40ರಿಂದ 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಉಷ್ಣಾಂಶವೂ ಸಾಮಾನ್ಯವಾಗಿದ್ದು, ಜನರು ಅದರ ನಡುವೆಯೇ ಜೀವನ ಸಾಗಿಸುತ್ತಾರೆ. ಆದರೆ ಇದೇ ಪರಿಸ್ಥಿತಿಯನ್ನು ಯುರೋಪ್ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಅನುಭವಿಸುತ್ತಿರುವಾಗ ಜಾಗತಿಕ ಮಾಧ್ಯಮಗಳ ವರದಿ ಮತ್ತು ಸಾಮಾಜಿಕ ಜಾಲತಾಣಗಳ ಪ್ರತಿಕ್ರಿಯೆ ಸಂಪೂರ್ಣ ಭಿನ್ನವಾಗಿದೆ ಎಂದು ಅವರು ಹೇಳಿದ್ದಾರೆ.


ಮುಂಬೈ ಸೇರಿದಂತೆ ಭಾರತದ ಹಲವು ನಗರಗಳಲ್ಲಿ ಬಿಸಿಯಿಂದ ಜನರು ಹೊರಾಂಗಣದಲ್ಲಿ ರಾತ್ರಿ ಕಳೆಯುವ ದೃಶ್ಯಗಳನ್ನು ಈ ಹಿಂದೆ ಅಪಹಾಸ್ಯ ಮಾಡಲಾಗಿತ್ತು. ಆದರೆ ಈಗ ಯುರೋಪ್‌ನಲ್ಲೂ ಇದೇ ರೀತಿಯ ಪರಿಸ್ಥಿತಿ ಕಂಡುಬಂದಾಗ ಅದಕ್ಕೆ ಸಹಾನುಭೂತಿ ವ್ಯಕ್ತವಾಗುತ್ತಿರುವುದು ಗಮನಾರ್ಹ ಎಂದು ಅವರು ಹೇಳಿದ್ದಾರೆ.
ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಹವಾಮಾನ ಬಿಕ್ಕಟ್ಟಿನಂತಹ ಜಾಗತಿಕ ಸಮಸ್ಯೆಗಳನ್ನು ಎಲ್ಲ ದೇಶಗಳಿಗೂ ಒಂದೇ ಮಾನದಂಡದಲ್ಲಿ ನೋಡುವ ಅಗತ್ಯವಿದೆ ಎಂಬ ಚರ್ಚೆಗೆ ಹೊಸ ವೇದಿಕೆ ಕಲ್ಪಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !