ಜಾತಿ ರಾಜಕೀಯವೇ ಕಾಂಗ್ರೆಸ್ ಹಿನ್ನಡೆಗೆ ಕಾರಣ: ಕೊಡಗಿನಲ್ಲಿ ಅಮಾನತುಗೊಂಡ ನಾಯಕರ ಆಕ್ರೋಶ

ಹೊಸದಿಗಂತ ವರದಿ, ಗೋಣಿಕೊಪ್ಪ:
ಜಿಲ್ಲೆಯ ಕಾಂಗ್ರೆಸ್ ಪಕ್ಷ ಬಡವ, ದೀನ, ದಲಿತರ ಪರ ಒಲವು ಹೊಂದಿಲ್ಲ. ಪಕ್ಷದ ಪ್ರಮುಖರು ಜಾತಿ ರಾಜಕೀಯದ ನೆಲೆಗಟ್ಟಿನಲ್ಲಿ ಪಕ್ಷವನ್ನು ಮುನ್ನೆಡೆಸುವ ಪ್ರಯತ್ನ ಹೀನಾಯ ಸೋಲಿಗೆ ಕಾರಣವಾಗುತ್ತಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಬಿ ಕಾಟಿ ಮುರುಘ ಆರೋಪಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತಾನಾಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕರೆನಿಸಿಕೊಂಡವರು ದಲಿತರು ಮತ್ತು ಓಬಿಸಿ ವರ್ಗದವರನ್ನು ತೀವ್ರವಾಗಿ ಕಡೆಗಣಿಸುತ್ತಿದ್ದಾರೆ. ಸಮಾಜದಲ್ಲಿ ಕೆಳಸ್ಥಾನದಲ್ಲಿ ಗುರುತಿಸಿಕೊಂಡವರನ್ನು ಪರಿಗಣನೆಗೆ ತೆಗೆದು ಮುನ್ನೆಲೆಗೆ ತರಬೇಕಾದ ನಾಯಕರುಗಳು, ಜಾತಿ ರಾಜಕೀಯವನ್ನು ಬೆರೆಸಿ ದಲಿತರನ್ನು ತುಳಿಯುವ ಪ್ರಯತ್ನ ಮುಂದುವರಿಸಿದ್ದಾರೆ. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಸೂಕ್ತ ಮನ್ನಣೆ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷ ಕಳೆದ 15 ವರ್ಷಗಳಿಂದ ನಿರಂತರವಾಗಿ ಚುನಾವಣೆಯಲ್ಲಿ ಸೋಲನ್ನು ಅನುಭವಿಸುತ್ತಿದೆ. ಪಕ್ಷದ ನಾಯಕರೆನಿಸಿಕೊಂಡವರಿಗೆ ಪ್ರತಿಯೊಂದು ಸಮುದಾಯದವರನ್ನು ಒಗ್ಗಟ್ಟಿನಿಂದ ಕರೆದೊಯ್ಯುವ ನಾಯಕತ್ವದ ಗುಣಗಳು ಇಲ್ಲದೇ ಇರುವುದು ಮತ್ತು ಸಮಾನತೆಯ ಚಿಂತನೆಗೆ ಒಳಪಡದೇ ಇರುವುದು ಪಕ್ಷ ಜಿಲ್ಲೆಯಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳಲು ಕಾರಣವಾಗಿದೆ ಎಂದು ಆರೋಪಿಸಿದರು.
ಒಬಿಸಿ ಮಹಿಳೆಯರಿಗೆ ಸರಿಯಾದ ಸ್ಥಾನಮಾನಗಳನ್ನು ನೀಡದೇ ಕಡೆಗಣನೆ ಮಾಡಲಾಗುತ್ತಿದೆ. ಪಕ್ಷದ ನಿಷ್ಠಾವಂತ ಮತ್ತು ಪ್ರಾಮಾಣಿಕ ಕಾರ್ಯಕರ್ತರಾಗಿ ಕಳೆದ 20 ವರ್ಷಗಳಿಂದ ನಿರಂತರವಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದು, ಅಂತಹವರ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ. ಮಾಧ್ಯಮಗಳಲ್ಲಿ ಮಹಿಳಾ ಕಾರ್ಯಕರ್ತರ ಬಗ್ಗೆ ಹೇಳಿಕೆಗಳನ್ನು ನೀಡುವ ಮೂಲಕ ಅಗೌರವ ತೋರುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಪಕ್ಷದ ಭರವಸೆಯ ನಾಯಕನಾಗಿ ಎಲ್ಲಾ ಸಮುದಾಯದವರನ್ನು ಒಗ್ಗಟ್ಟಿನಿಂದ ಕರೆದೊಯ್ಯುವ ನಿಷ್ಠಾವಂತ ನಾಯಕರ ಸಾಲಿಗೆ ಸೇರುವ ಮತ್ತು ಪಕ್ಷವನ್ನು ಜಿಲ್ಲೆಯಲ್ಲಿ ಮುನ್ನೆಡೆಗೆ ತರಬೇಕು ಎಂಬ ಚಿಂತನೆಯಲ್ಲಿ ಇತ್ತೀಚೆಗೆ ಜಿಲ್ಲೆಯಲ್ಲಿ ಪ್ರಚಾರದಲ್ಲಿದ್ದ ಕದ್ದಣಿಯಂಡ ಹರೀಶ್ ಬೋಪಣ್ಣ ಅವರ ನಡೆಯನ್ನು ಸಹಿಸದ ಜಿಲ್ಲೆಯ ನಾಯಕರುಗಳು ಕಡೆಗಣಿಸುವ ಮೂಲಕ ಅವರು ಪಕ್ಷದ ಮುಖ್ಯವಾಹಿನಿಗೆ ಬಾರದಂತೆ ಷಡ್ಯಂತ್ರಗಳನ್ನು ನಡೆಸುತ್ತಿದ್ದಾರೆ. ಇಂತಹ ಬೆಳವಣಿಗೆಗಳೇ ಕಾಂಗ್ರೆಸ್ ಪಕ್ಷದ ಹಿನ್ನೆಡೆಗೆ ಕಾರಣವಾಗುತ್ತಿದೆ ಎಂದು ಹೇಳಿದರು.
ಕಾರ್ಯಕರ್ತರ ಮೇಲೆ ವಿಶ್ವಾಸವಿಡದೆ ಸ್ಥಳೀಯ ಪ್ರಮುಖರ ಮಾತುಗಳಿಗೆ ಮನ್ನಣೆ ನೀಡಿ ಅಮಾನತಿಗೆ ಆದೇಶ ನೀಡುವ ಮೂಲಕ ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕಾರ್ಯ ನಡೆಯುತ್ತಿದೆ. ಇವರ ವೈಯಕ್ತಿಕ ಕಾರಣಗಳಿಂದಾಗಿ ಈ ಪ್ರಕ್ರಿಯೆ ಕೇವಲ ದಲಿತ ಮತ್ತು ಓಬಿಸಿ ವರ್ಗದವರ ಮೇಲೆ ಮಾತ್ರ ನಡೆಸುತ್ತಿರುವುದು ವಿಪರ್ಯಾಸವಾಗಿದೆ. ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿಯೂ ಸರಿತಾ ಪೂಣಚ್ಚ ಅವರ ವಿರುದ್ದ ಬಹಳಷ್ಟು ಕಾರ್ಯಕರ್ತರು ಪಕ್ಷ ವಿರೋಧಿ ಚಟುವಟಿಕೆಯನ್ನು ನಡೆಸಿದರು. ಆ ಸಂದರ್ಭದಲ್ಲಿ ಯಾವುದೇ ಕ್ರಮ ಕೈಗೊಳ್ಳದ ಪ್ರಮುಖರು ಏಕಾಏಕಿಯಾಗಿ ಪಕ್ಷದಲ್ಲಿ ಪ್ರಾಮಾಣಿಕವಾಗಿ ಗುರುತಿಸಿಕೊಂಡ ನಾಲ್ವರನ್ನು ಅಮಾನತು ಮಾಡಲು ಆದೇಶ ನೀಡಿರುವುದು ಗೋಣಿಕೊಪ್ಪ ನಗರ ಮತ್ತು ಬ್ಲಾಕ್ ಅಧ್ಯಕ್ಷರ ಪಕ್ಷ ಸಂಘಟನೆಯ ವೈಫಲ್ಯತೆಗೆ ಸಾಕ್ಷಿಯಾಗಿದೆ. ಇಂತಹ ಘಟನೆಗಳ ಬಗ್ಗೆ ಪ್ರಶ್ನಿಸುವ ಮೂಲಕ ಕಾರ್ಯಕರ್ತರಿಗೆ ನ್ಯಾಯ ಒದಗಿಸಲು ನಾಯಕರುಗಳು ಮುಂದಾಗಬೇಕೆಂದು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಕಾರ್ಯಕರ್ತರಾದ ತಂಬಿ, ಶೀಬಾ ಮಣಿ, ಹರಿದಾಸ್ ಮಣಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!