ಕಾವೇರಿ ವಿವಾದಕ್ಕೆ ನ್ಯಾಯಾಲಯದಿಂದ ಪರಿಹಾರ ಸಿಗಲ್ಲ: ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

ಹೊಸದಿಗಂತ ವರದಿ ಮದ್ದೂರು:

ಕಾವೇರಿ ವಿವಾದಕ್ಕೆ ನ್ಯಾಯಾಲಯದಿಂದ ಪರಿಹಾರ ಸಿಗುವುದಿಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ರಾಜ್ಯಸರ್ಕಾರ ಸುಪ್ರೀಂಕೋರ್ಟ್‌ಗೆ ಒಂದು ಅರ್ಜಿಯನ್ನು ಸಲ್ಲಿಸಬೇಕು. ಒಂದು ಸ್ವತಂತ್ರ ಪರಿಶೀಲನಾ ಸಮಿತಿಯನ್ನು ನೇಮಕ ಮಾಡಬೇಕು. ಅವರು ನಮ್ಮ ರಾಜ್ಯಕ್ಕೆ ಸೇರಿದವರೂ ಆಗಿರಬಾರದು. ತಮಿಳುನಾಡಿಗೆ ಸೇರಿದವರೂ ಆಗಿರಬಾರದು. ಆ ಸಮಿತಿಯನ್ನು ರಾಜ್ಯಕ್ಕೆ ಕಳುಹಿಸಿ ನೀರಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ವರದಿ ಪಡೆಯಬೇಕು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಸಮಿತಿ ನೀಡುವ ವರದಿಯಲ್ಲಿ ನಮ್ಮಲ್ಲಿ ಸಾಕಷ್ಟು ನೀರಿದೆ, ಸುಳ್ಳು ಹೇಳುತ್ತಿದ್ದೇವೆ ಎನ್ನುವುದಾದರೆ ನೀರು ಕೊಡಲೇಬೇಕು. ಇಲ್ಲದಿದ್ದರೆ ನಮ್ಮ ನೀರನ್ನು ನಮಗೆ ಬಿಟ್ಟುಕೊಡಬೇಕು. ನಾವು ತಮಿಳುನಾಡಿನವರಿಗೆ ನೀರನ್ನು ದಾನ ಮಾಡಿ ನಮ್ಮವರನ್ನು ಕೊಲ್ಲುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.

ಕಾವೇರಿ ವಿಷಯದಲ್ಲಿ ರಾಜ್ಯ ಸರ್ಕಾರದಿಂದ ಸರಿಯಾದ ವಾದಮಂಡನೆಯಾಗುತ್ತಿಲ್ಲವೆಂಬ ಆರೋಪದ ಬಗ್ಗೆ ಕೇಳಿದಾಗ, ಒಬ್ಬ ನ್ಯಾಯಮೂರ್ತಿಯಾಗಿ ಆ ವಿಚಾರದಲ್ಲಿ ಇನ್ನೊಬ್ಬರನ್ನು ದೂಷಿಸುವುದಿಲ್ಲ ಎಂದು ಹೇಳಿದರು.

ರಾಜಕೀಯ ಬೆಳವಣಿಗೆಗಳ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ಹಿಂದೆ ರಾಜಕೀಯ ಎನ್ನುವುದು ಒಂದು ಸೇವೆಯಾಗಿತ್ತು. ಈಗ ಅದು ವೃತ್ತಿಯಾಗಿದೆ. ಸುಲಭವಾಗಿ ದುಡ್ಡು ಮಾಡಬಹುದಾದ ಕ್ಷೇತ್ರವಾಗಿದೆ. ಪ್ರಸ್ತುತ ಸೇವೆಗೆ ಇಲ್ಲಿ ಜಾಗವೇ ಇಲ್ಲ. ಇದಕ್ಕಾಗಿಯೇ ನ್ಯಾಯಾಧೀಶರು, ಐಎಎಸ್, ಐಪಿಎಸ್ ಅಧಿಕಾರಿಗಳು ರಾಜಕೀಯಕ್ಕೆ ಬರುತ್ತಿದ್ದಾರೆ. ಸೇವೆ ಮಾಡುವವರಷ್ಟೇ ರಾಜಕೀಯಕ್ಕೆ ಬರಬೇಕು. ವೃತ್ತಿ ಮಾಡಿಕೊಳ್ಳುವವರು ಬಂದರೆ ವ್ಯವಸ್ಥೆ ಅವ್ಯವಸ್ಥೆಯಾಗುತ್ತದೆ. ಇದನ್ನು ಸರಿಪಡಿಸಬೇಕಾದರೆ ಜನರು ಎಚ್ಚೆತ್ತುಕೊಳ್ಳಬೇಕು ಎಂದು ನುಡಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!