ಕಾವೇರಿ-ಕೊಡವ ಮಹಿಳೆಯರ ಅವಹೇಳನ: ಜು.18ರಂದು ವೀರಾಜಪೇಟೆಯಲ್ಲಿ ಪ್ರತಿಭಟನೆ

ಹೊಸದಿಗಂತ ವರದಿ ಮಡಿಕೇರಿ:
ಕೊಡಗಿನ ಕಾವೇರಿ ಹಾಗೂ ಕೊಡವ ಮಹಿಳೆಯರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿದ ಆರೋಪಿಯನ್ನು ಬಂಧಿಸಬೇಕು ಮತ್ತು ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ಜು.18 ರಂದು ವಿಹೆಚ್‌ಪಿ, ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ವೀರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಲಿವೆ ಎಂದರು.

ಕಾವೇರಿಯ ಆರಾಧಕರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿರುವುದಲ್ಲದೆ, ಭಕ್ತರ ಮನಸ್ಸಿಗೆ ನೋವುಂಟು ಮಾಡಿರುವ ಕಿಡಿಗೇಡಿ, ಕಾವೇರಿ ಪುಣ್ಯತೀರ್ಥದ ಬಗ್ಗೆ ತೀರಾ ಕೀಳಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾನೆ. ಕೊಡಗಿನ ಹೆಣ್ಣು ಮಕ್ಕಳ ಗೌರವಕ್ಕೆ ಚ್ಯುತಿ ತಂದಿದ್ದಾನೆ. ಪ್ರಕರಣದ ನೈಜ ಆರೋಪಿಯನ್ನು ಬಂಧಿಸಿ, ಜೈಲಿಗಟ್ಟುವ ಕೆಲಸವನ್ನು ಪೋಲೀಸ್ ಇಲಾಖೆ ಮಾಡದೇ ಇರುವುದು ಸಂಶಯಗಳಿಗೆ ಎಡೆ ಮಾಡಿದೆ. ಕೊಡಗು ಪೊಲೀಸರ ವೈಫಲ್ಯ ಇಲಾಖೆಯ ಮೇಲೆ ಸಾರ್ವಜನಿಕರಿಗಿದ್ದ ನಂಬಿಕೆಯನ್ನು ಪರಾಮರ್ಶಿಸುವಂತೆ ಮಾಡಿದೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೆ ಇರುವುದರಿಂದಾಗಿ ಮತ್ತೆ ಮತ್ತೆ ಈ ರೀತಿಯ ಘಟನೆಗಳು ಮರುಕಳಿಸುತ್ತಿವೆ ಎಂದು ದೂರಿದರು.

ಇದರ ಹಿಂದೆ ಇರುವ ಸಂಘಟನೆಗಳನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಬೇಕು ಮತ್ತು ಆರೋಪಿಯನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಸೋಮವಾರ ಬೆಳಗ್ಗೆ ವೀರಾಜಪೇಟೆಯ ಶ್ರೀಮಾರಿಯಮ್ಮ ದೇವಾಲಯದ ಬಳಿಯಿಂದ ದೊಡ್ಡ ಗಡಿಯಾರ ಕಂಬದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಸಾಂಕೇತಿಕವಾಗಿ ನಡೆಸಲಾಗುವುದು ಎಂದು ರಮೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತದ್ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ವೀರಾಜಪೇಟೆ ತಾಲೂಕು ಕಾರ್ಯದರ್ಶಿ ಯತೀಶ್, ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸದಸ್ಯ ಶಾಂತೆಯಂಡ ತಿಮ್ಮಯ್ಯ, ಮಡಿಕೇರಿ ನಗರ ಸದಸ್ಯ ಸಂದೀಪ್ ರೈ ಹಾಗೂ ಭಜರಂಗದಳದ ಮಡಿಕೇರಿ ನಗರಾಧ್ಯಕ್ಷ ಸುಧೀಂದ್ರ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!