ಲಾಲೂ ಪ್ರಸಾದ್‌ ಯಾದವ್‌ ಗೆ ಸಿಬಿಐ ಶಾಕ್;‌ ಕಚೇರಿ, ನಿವಾಸ ಸೇರಿ 15 ಸ್ಥಳಗಳಲ್ಲಿ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇವು ಹಗರಣ ಪ್ರಕರಣದಲ್ಲಿ ಇತ್ತೀಚೆಗೆ ಜಾಮೀನು ಪಡೆದಿದ್ದ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಕೊರಳಿಗೆ ಮತ್ತೊಂದು ಪ್ರಕರಣ ಸುತ್ತಿಕೊಂಡಿದೆ. ರೈಲ್ವೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಲಾಲೂ ಹಾಗೂ ಅವರ ಮಗಳ ನಿವಾಸ, ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದಾಗ 2004 ಮತ್ತು 2009 ರ ನಡುವೆ ನೇಮಕಾತಿಯಲ್ಲಿ ಅಕ್ರಮಗಳ ಸಂಬಂಧ ಹೊಸದಾಗಿ ವಿಚಾರಣೆಗೆ ಮುಂದಾಗಿರುವ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಲಾಲೂ ನಿವಾಸ ಸೇರಿದಂತೆ 15 ಸ್ಥಳಗಳಲ್ಲಿ ಶೋಧ ಆರಂಭಿಸಿದೆ. ಲಾಲೂ ಪ್ರಸಾದ್ ಯಾದವ್ ಜೊತೆಗೆ ಅವರ ಪುತ್ರಿ, ಮತ್ತು ಇತರ ಕುಟುಂಬ ಸದಸ್ಯರನ್ನೂ ಹೊಸ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಯಾದವ್ ಮತ್ತು ಅವರ ಕುಟುಂಬ ಸದಸ್ಯರು ರೈಲ್ವೆ ಉದ್ಯೋಗಗಳನ್ನು ನೀಡುವುದಕ್ಕಾಗಿ ಭೂಮಿ ಮತ್ತು ಆಸ್ತಿಯನ್ನು ಲಂಚವಾಗಿ ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ. 139 ಕೋಟಿ ಡೊರಾಂಡಾ ಖಜಾನೆ ಹಗರಣ ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದ ನಂತರ 73 ವರ್ಷದ ಹಿರಿಯ ನಾಯಕ ಕಳೆದ ತಿಂಗಳು ಜೈಲಿನಿಂದ ಹೊರಬಂದಿದ್ದರು. ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಫೆಬ್ರವರಿಯಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅಲ್ಲದೆ ₹ 60 ಲಕ್ಷ ದಂಡವನ್ನೂ ವಿಧಿಸಿದ್ದಾರೆ.
ಯಾದವ್ ಅವರ ಪತ್ನಿ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ಪಾಟ್ನಾ ನಿವಾಸದಲ್ಲಿ ಇಂದು ಬೆಳಿಗ್ಗೆ ಅಧಿಕಾರಿಗಳು ದಾಳಿ ನಡೆಸಿದ ದೃಶ್ಯಗಳು ವೈರಲ್‌ ಆಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!