ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) 10ನೇ ತರಗತಿಯ 2026ರ ಸಾಲಿನ ಫಲಿತಾಂಶವನ್ನು ಇಂದು ಸಂಜೆ ಪ್ರಕಟಿಸುವ ಮೂಲಕ ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಹೊರಬರುತ್ತಿದ್ದ ಫಲಿತಾಂಶ, ಈ ಬಾರಿ ತಾಂತ್ರಿಕ ಸುಧಾರಣೆಗಳಿಂದಾಗಿ ದಾಖಲೆ ಅವಧಿಯಲ್ಲಿ ಏಪ್ರಿಲ್‌ನಲ್ಲೇ ಬಿಡುಗಡೆಯಾಗಿದೆ.
ಈ ವರ್ಷ ಒಟ್ಟು ಶೇ. 93.70 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವರ್ಷಕ್ಕೆ (ಶೇ. 93.66) ಹೋಲಿಸಿದರೆ ಈ ಬಾರಿ ಉತ್ತೀರ್ಣ ಪ್ರಮಾಣದಲ್ಲಿ ಶೇ. 0.04 ರಷ್ಟು ಪ್ರಗತಿ ಕಂಡುಬಂದಿದೆ.
ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ. 94.99 ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಇದು ಬಾಲಕರ ಉತ್ತೀರ್ಣ ಪ್ರಮಾಣಕ್ಕಿಂತ ಶೇ. 1.3 ರಷ್ಟು ಹೆಚ್ಚಿದೆ.
55,368 ವಿದ್ಯಾರ್ಥಿಗಳು ಶೇ. 95 ಕ್ಕಿಂತ ಹೆಚ್ಚು ಅಂಕ ಗಳಿಸಿದರೆ, 2,21,574 ವಿದ್ಯಾರ್ಥಿಗಳು ಶೇ. 90 ಕ್ಕಿಂತ ಹೆಚ್ಚು ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ದೇಶಾದ್ಯಂತ 8,074 ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಗೆ 24.71 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಮಂಡಳಿಯು ಬರೋಬ್ಬರಿ 1.63 ಕೋಟಿ ಉತ್ತರ ಪತ್ರಿಕೆಗಳನ್ನು ಅತ್ಯಂತ ವೇಗವಾಗಿ ಮೌಲ್ಯಮಾಪನ ಮಾಡಿದೆ.
ಹೊಸ ಶಿಕ್ಷಣ ನೀತಿ ಅಡಿಯಲ್ಲಿ ತರಲಾದ ತಾಂತ್ರಿಕ ಬದಲಾವಣೆಗಳು, ದ್ವಿ-ಪರೀಕ್ಷಾ ವ್ಯವಸ್ಥೆ ಮತ್ತು ಪಾರದರ್ಶಕ ಮೌಲ್ಯಮಾಪನ ಪ್ರಕ್ರಿಯೆಯಿಂದಾಗಿ ಈ ಬಾರಿ ಫಲಿತಾಂಶವು ಅಸಾಧಾರಣವಾಗಿ ಮೂಡಿಬಂದಿದೆ ಎಂದು ಮಂಡಳಿ ತಿಳಿಸಿದೆ.
ವಿದ್ಯಾರ್ಥಿಗಳು ಈ ಕೆಳಗಿನ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ತಮ್ಮ ಫಲಿತಾಂಶವನ್ನು ಪಡೆಯಬಹುದು:
results.cbse.nic.in
cbse.gov.in
digilocker.gov.in
ಗಮನಿಸಿ.. ಫಲಿತಾಂಶ ನೋಡಲು ನಿಮ್ಮ ರೋಲ್ ನಂಬರ್, ಶಾಲಾ ಸಂಖ್ಯೆ, ಜನ್ಮ ದಿನಾಂಕ ಮತ್ತು ಪ್ರವೇಶ ಪತ್ರದ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಿ. ವೆಬ್‌ಸೈಟ್‌ನಲ್ಲಿ ಒಟ್ಟು ಮೂರು ಲಿಂಕ್‌ಗಳನ್ನು ಒದಗಿಸಲಾಗಿದ್ದು, ಸುಲಭವಾಗಿ ರಿಸಲ್ಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು.



