ಹೊಸದಿಗಂತ ವರದಿ, ಬೆಂಗಳೂರು:
ರಾಜ್ಯ ಸರ್ಕಾರ ಹುಕ್ಕಾ ಬಾರ್ಗಳ ಮೇಲೆ ನಿಷೇಧ ಹೇರಿದ್ದು, ಅನಧೀಕೃತವಾಗಿ ಹುಕ್ಕಾ ಬಾರ್ಗಳನ್ನು ನಡೆಸುತ್ತಿದ್ದ ಸ್ಥಳಗಳಲ್ಲಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ದಾಳಿ ನಡೆಸಿ, 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ಬಂಧನದಿಂದ 12.5 ಲಕ್ಷ ರೂ ಮೌಲ್ಯದ ಹುಕ್ಕಾ ಪ್ಲೇವರ್ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸುಹೇಲ್ ಮತ್ತು ಬರ್ಫಿ ಬಂಧಿತರು. ಸಿಸಿಬಿ ಪೊಲೀಸರು ಮಹಾಲಕ್ಷ್ಮೀ ಲೇಔಟ್ ಠಾಣೆ ವ್ಯಾಪ್ತಿಯಲ್ಲಿರುವ ಹುಕ್ಕಾ ಬಾರ್ಬಾರ್ ಮೇಲೆ ದಾಳಿ ನಡೆಸಿದ್ದು ಆರೋಪಿಗಳು ಅಕ್ರಮವಾಗಿ ಕೂಡಿಟ್ಟಿದ್ದ 2 ಲಕ್ಷ ರೂ. ಮೌಲ್ಯದ 5 ಹುಕ್ಕಾ ಪಾಟ್ಗಳು, ಹುಕ್ಕಾ ಪ್ಲೇವರ್ಗಳು, ಚಾರ್ಕೋಲ್ ಬಾಕ್ಸ್ ಮತ್ತು ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಎಚ್ಎಎಲ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದಹುಕ್ಕಾ ಬಾರ್ ಮೇಲೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿ ಸಲಾಗಿದೆ. ಮೊಹಮ್ಮದ್ ಶಾಹೀರ್(27) ಮತ್ತು ಮೊಹಮ್ಮದ್ ಶಾಮ್ಸ್(20) ಬಂಧಿತರು. ಆರೋಪಿಗಳಿಂದ 10 ಲಕ್ಷ ರೂ ಮೌಲ್ಯದ 710 ಹುಕ್ಕಾ ಪ್ಲೇವರ್ಗಳು, 36 ಹುಕ್ಕಾ ಪ್ಯಾಕೆಟ್ ಸೆಟ್, ಸೇರಿ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಕೆ.ಆರ್.ಪುರ ಠಾಣೆ ವ್ಯಾಪ್ತಿಯಲ್ಲಿ ಹುಕ್ಕಾ ಬಾರ್ ಮೇಲೆ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 50 ಸಾವಿರ ರೂ ಮೌಲ್ಯದ 3 ಹುಕ್ಕಾ ಪ್ಲೇವರ್ಗಳು, 5 ಹುಕ್ಕಾ ಪಾಟ್ಗಳು, ನಗದು ಜಪ್ತಿಮಾಡಲಾಗಿದೆ ಎಂದು ಪೊಲೀಸರು ಹೇಳಿದರು.