ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಹಗರಣ ತನಿಖೆ ತೀವ್ರಗೊಂಡಿದ್ದು ಬಗೆದಷ್ಟು ಆಘಾತಕಾರಿ ಅಂಶಗಳು ಬಯಲಾಗುತ್ತಿವೆ. ಅಕ್ರಮ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾ ತಂಡ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದೆ. ಈ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ವಿಚಾರ ಬಯಲಾಗಿದೆ.ಮುಡಾ ಆಯುಕ್ತರ ನಿವಾಸದಲ್ಲಿದ್ದ ಸಿಸಿಟಿವಿ, ಡಿವಿಆರ್ ಮಂಗಮಾಯವಾಗಿದೆ.
ಮೈಸೂರಿನ ಮುಡಾ ಆಯುಕ್ತರ ಅಧಿಕೃತ ನಿವಾಸದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳು ಮತ್ತು ಡಿಜಿಟಲ್ ವಿಡಿಯೋ ರೆಕಾರ್ಡರ್ (ಡಿವಿಆರ್) ನಾಪತ್ತೆಯಾಗಿದೆ. ಮೂಲಗಳ ಪ್ರಕಾರ, ಮುಡಾ ಆಯುಕ್ತರ ಅಧಿಕೃತ ನಿವಾಸವು ‘ಗೃಹ’ ಕಚೇರಿ ಎಂದು ಪರಿಗಣಿಸಲ್ಪಟ್ಟ ಕಾರಣ ವೀಡಿಯೊ ಸಾಕ್ಷ್ಯವನ್ನು ಹೊಂದಿದ್ದು, ಅಲ್ಲಿ ಸೂಕ್ಷ್ಮ ಸಭೆಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಮುಡಾದ ಕೆಲ ಅಧಿಕಾರಿಗಳು ಸಿಸಿಟಿವಿ ಮತ್ತು ಡಿವಿಆರ್ ಕೊಂಡೊಯ್ದಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಇದು ಡಿಜಿಟಲ್ ಸಾಕ್ಷ್ಯ ಆಗಬಹುದೆಂಬ ಕಾರಣಕ್ಕೆ ಅವರು ಸಾಕ್ಷ್ಯ ನಾಶಕ್ಕಾಗಿ ಇವನ್ನು ತೆರವು ಮಾಡಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಮುಡಾದ ಹಾಲಿ ಆಯುಕ್ತರು, ಮುಡಾ ಕಟ್ಟಡ ನಿರ್ವಹಣೆ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಿದ್ದಾರೆ.