ಮನೆ ಕೆಲಸದವಳ ಕ್ರೌರ್ಯ: ಎರಡು ವರ್ಷದ ಬಾಲಕನಿಗೆ ಚಿತ್ರಹಿಂಸೆ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉದ್ಯೋಗಸ್ಥ ಪೋಷಕರು ಓದಲೇಬೇಕಾದ ಸುದ್ದಿಯಿದು. ಕೆಲಸದ ಒತ್ತಡದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಪುರುಸೊತ್ತಿಲ್ಲದೆ ಕೆಲಸದವರ ಕೈಗೆ ನಿಮ್ಮ ಮಕ್ಕಳನ್ನು ಕೊಟ್ಟರೆ ಅಷ್ಟೇ ಕತೆ. ಮಗು ಆರೈಕೆಗೆಂದು ಬಂದ ಮನೆ ಕೆಲಸದವಳು ಎರಡು ವರ್ಷದ ಬಾಲಕನಿಗೆ ಚಿತ್ರಹಿಂಸೆ ನೀಡಿರುವ ಘಟನೆ ಮಧ್ರಪ್ರದೇಶದ ಜಬಲ್‌ಪುರದಲ್ಲಿ ಬೆಳಕಿಗೆ ಬಂದಿದೆ.

ಪತಿ-ಪತ್ನಿ ಇಬ್ಬರೂ ಉದ್ಯೋಗಸ್ಥರಾದ್ದರಿಂದ ತಮ್ಮ ಎರಡು ವರ್ಷದ ಮಗುವನ್ನು ನೋಡಿಕೊಳ್ಳಲು ಒಬ್ಬ ಆಯಾಳನ್ನು ನೇಮಿಸಿದ್ದಾರೆ. ಹೆತ್ತವರಿದ್ದಾಗ ಮಗುವಿನ ಮೇಲೆ ಇಲ್ಲ-ಸಲ್ಲದ ಮಮಕಾರ ತೋರಿಸುವ ಕಿರಾತಕಿ ಅವರು ಕೆಲಸಕ್ಕೆ ಹೋದ ಮೇಲೆ ರಾಕ್ಷಸಿಯಂತೆ ವರ್ತಿಸಿದ್ದಾಳೆ. ಸಖತ್‌ ಆಕ್ಟೀವ್‌ ಆಗಿದ್ದ ಮಗು ಇದ್ದಕ್ಕಿದ್ದಂತೆ ನೀರಸವಾಗಿದ್ದಾನೆ. ಒಂದೆರಡು ದಿನ ಇದೆಲ್ಲ ನಾರ್ಮಲ್‌ ಎಂದುಕೊಂಡ ಹೆತ್ತವರು ಕೊನೆಗೆ ವೈದ್ಯರ ಮಾತು ಕೇಳಿ ಶಾಕ್‌ ಆಗಿದ್ದಾರೆ.

ಮಗುವಿನ ಆಂತರಿಕ ಅಂಗಗಳು ಊದಿಕೊಂಡಿದ್ದು ಯಾರೋ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ ದಂಪತಿಗೆ ನಿಜಾಂಶ ತಿಳಿದಿದೆ. ಮಗು ಆರೈಕೆಗೆಂದು 5ಸಾವಿರ ಸಂಬಳ, ಊಟೋಪಚಾರ ನೀಡಿ ನೇಮಿಸಿಕೊಂಡ ಕಿರಾತಕಿ ರಜನಿ ಮಗುವಿಗೆ ಕೊಟ್ಟ ಟಾರ್ಚರ್‌ ನೋಡಿ ಹೆತ್ತವರು ಕಣ್ಣೀರು ಹಾಕಿದ್ದಾರೆ. ಅನ್ನ ತಿನ್ನದಿದ್ದರೆ, ವಾಶ್ ರೂಮಿಗೆ ಹೋದರೆ, ಹೇಳಿದ ಮಾತನ್ನು ಕೇಳದಿದ್ದರೆ, ರಜನಿ ಫೋನ್ ನೋಡುವಾಗ ಡಿಸ್ಟರ್ಬ್‌ ಮಾಡಿದರೆ ಆ ಪುಟ್ಟ ಕಂದನನ್ನು ಕರುಣೆಯಿಲ್ಲದೆ ಮನಬಂದಂತೆ ಹೊಡೆದು, ಕೂದಲು ಹಿಡಿದು ಎಳೆಯುವುದು, ಕತ್ತು ಹಿಡಿದು ಮೇಲಕ್ಕೆ ಎತ್ತಿ ಇಷ್ಟಬಂದಂತೆ ಹೊಟ್ಟೆಗೆ ಹೊಡೆದ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ರಜನಿ ಮಾಡಿದ ಹೇಯ ಕೃತ್ಯಕ್ಕೆ ರೋಸಿ ಹೋದ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಜನಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!