ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ನಗರದ ಅಗ್ರಹಾರದಲ್ಲಿರುವ ಶ್ರೀ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದಲ್ಲಿ ಧನ್ವಂತರಿ ಜಯಂತಿ ಅಂಗವಾಗಿ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಸಪ್ತರಾತ್ರೋತ್ಸವದೊಂದಿಗೆ ಧನ್ವಂತರಿ ಜಯಂತಿ ಸಂಭ್ರಮದಿಂದ ನೆರವೇರಿತು.
ದೇಶದಲ್ಲಿಯೇ ಅತಿ ದೊಡ್ಡದಾದ ಧನ್ವಂತರಿ ಸನ್ನಿಧಾನದಲ್ಲಿ ಗುರುವಾರ ಬೆಳಗ್ಗೆ ಎಂಟಕ್ಕೆ ಸ್ವಾಮಿಗೆ ವಿಶೇಷ ಫಲ ಪಂಚಾಮೃತ ಅಭಿಷೇಕ , ಹೂವಿನ ಅಲಂಕಾರ ಮಹಾಮಂಗಳಾರತಿ ನೆರವೇರಿತು. ನೂರಾರು ಭಕ್ತರು ಧನ್ವಂತರಿ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ನೆರವೇರಿಸಿದರು. ಇದೇ ಸಂದರ್ಭದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಸಾಮೂಹಿಕವಾಗಿ ಶ್ರೀ ಹರಿವಾಯು ಸ್ತುತಿ ಪಾರಾಯಣ ನೆರವೇರಿತು.
ಮಹಾಯಾಗ:
ಲೋಕ ಕಲ್ಯಾಣಾರ್ಥವಾಗಿ ಮತ್ತು ಸರ್ವರ ಆರೋಗ್ಯ ಪಾಲನೆ ಸಂಕಲ್ಪದೊಂದಿಗೆ ಶ್ರೀಮಠದಲ್ಲಿ ಗುರುವಾರ ಬೆಳಗಿನ ಅವಧಿಯಲ್ಲಿ 10,000 ಅಮೃತ ಬಳ್ಳಿ ಆಹುತಿಯೊಂದಿಗೆ ಮಹಾ ಧನ್ವಂತರಿ ಯಾಗ ಭಕ್ತಿ ಭಾವದಿಂದ ನೆರವೇರಿದ್ದು ವಿಶೇಷವಾಗಿತ್ತು. ಹಿರಿಯ ವಿದ್ವಾಂಸರಾದಗೋವಿಂದಾಚಾರ್ಯ ಮತ್ತು ಶೈಲಾ ದಂಪತಿ ಮಹಾ ಧನ್ವಂತರಿ ಯಾಗಕ್ಕೆ ಪೂರ್ಣಾಹುತಿ ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು.
ನಂತರ 500ಕ್ಕೂ ಹೆಚ್ಚು ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.
ಧನ್ವಂತರಿ ಸನ್ನಿಧಿಯ ವ್ಯವಸ್ಥಾಪಕ ನಿರುದ್ಧಾಚಾರ್ಯ ಅವರು ಮಾತನಾಡಿ, ಧನ್ವಂತರಿ ಸ್ವರೂಪದ ಲ್ಲಿ ಸದಾ ನಮ್ಮ ಅವಯವಗಳನ್ನು ಸುಸ್ಥಿರವಾಗಿ ಇಟ್ಟು ಕಾಪಾಡುತ್ತಾನೆ. ಅವನಿಗೆ ಒಂದು ಧನ್ಯತೆ ಸಮರ್ಪಣೆ ಮಾಡುವ ಭಾಗ್ಯ ನಮಗೆ ಈ ಜನ್ಮದಲ್ಲಿ ದೊರಕಿದೆ. ನಮ್ಮೆಲ್ಲರ ದೇಹ , ಮನಸ್ಸು ಆರೋಗ್ಯ ಕರವಾಗಿ ಇದ್ದರೆ ದೇಶವೂ ಚೆನ್ನಾಗಿ ಇರುತ್ತದೆ ಎಂದು ಹೇಳಿದರು.
ಸಾಂಸ್ಕೃತಿಕ ವೈವಿಧ್ಯ:
ಸಪ್ತ ರಾತ್ರೋತ್ಸವದ ಅಂಗವಾಗಿ ಆಗಸ್ಟ್ 30 ರಿಂದ ಸೆಪ್ಟೆಂಬರ್ 5 ರವರೆಗೆ ಪ್ರತಿದಿನವೂ ಧನ್ವಂತರಿ ದೇವರಿಗೆ ಒಂದೊಂದು ವಿಶೇಷ ಅಲಂಕಾರ. ಸಂಜೆ ರವಿಕುಮಾರ್ ನೇತೃತ್ವದಲ್ಲಿ ನವ,ಯುವ ಕಲಾವಿದರಿಂದ ಸಂಗೀತ ಮತ್ತು ನೃತ್ಯೋತ್ಸವ ರಂಜನೆ ನೀಡಿತು.