ಮೋಪ್ಲಾ ಹತ್ಯಾಕಾಂಡದ ನಿಜಚಿತ್ರಣ ತಿಳಿಸಹೊರಟ ಚಿತ್ರಕ್ಕೆ ಸೆನ್ಸಾರ್ ಕಾಟ?

ಹೊಸ ದಿಗಂತ ಡಿಜಿಟಲ್ ಡೆಸ್ಕ್
‘ಪುಳ ಮುತಲ್ ಪುಳ ವರೆ’ ಎಂಬ ಮಲಯಾಳಂ ಚಿತ್ರವೊಂದಕ್ಕೆ ಸಿ ಬಿ ಎಫ್ ಸಿ (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮಂ ಸರ್ಟಿಭಿಕೇಶನ್) ಸಿಕ್ಕಾಪಟ್ಟೆ ಕಡಿತಗಳನ್ನು ಸೂಚಿಸಿದ್ದರಿಂದ, ಮೊಪ್ಲಾ ಹತ್ಯಾಕಾಂಡದ ಕುರಿತಾಗಿದ್ದ ಆ ಚಿತ್ರ ಹೊರಬರದೇ ನಿಂತಿದೆ ಎಂದು ಒಪಿಂಡಿಯಾ ವರದಿ ಮಾಡಿದೆ.
ಕೇರಳದ ನಿರ್ದೇಶಕ ಅಲಿ ಅಕ್ಬರ್ ಇತ್ತೀಚೆಗೆ ಇಸ್ಲಾಮಿನ ಕಟ್ಟರ್ ವಾದದಿಂದ ಬೇಸತ್ತು ಹಿಂದುಧರ್ಮದೊಂದಿಗೆ ತಮ್ಮನ್ನು ಗುರುತಿಸಿಕೊಂಡು ರಾಮಸಿಂಹನ್ ಎಂದು ಹೆಸರು ಬದಲಿಸಿಕೊಂಡಿದ್ದನ್ನು ಬಹುಶಃ ನೀವು ಓದಿರುತ್ತೀರಿ. ಆ ನಿರ್ದೇಶಕ ಇದೀಗ ಮೋಪ್ಲಾ ದಂಗೆ ಸಮಯದಲ್ಲಿ ಮುಸ್ಲಿಮರು ಕೇರಳದಲ್ಲಿ ಹಿಂದುಗಳನ್ನು ಹತ್ಯೆಗೈದಿದ್ದರ ವಿವರ ಇರುವ ಚಿತ್ರ ನಿರ್ದೇಶಿಸಿ ಅದನ್ನು ಸೆನ್ಸಾರ್ ಎದುರು ಇಟ್ಟಿದ್ದರು. ಈ ನಿರ್ದೇಶಕರೊಂದಿಗೆ ಮಾತನಾಡಿರುವ ಒಪಿಂಡಿಯಾ ವರದಿ ಮಾಡಿರುವ ಪ್ರಕಾರ, ಸೆನ್ಸಾರ್ ಮಂಡಳಿಯ ಎರಡನೇ ಬಾರಿಯ ಪರಿಶೀಲನೆ ವೇಳೆ ಚಿತ್ರದಲ್ಲಿ ತುಂಡರಿಸಬೇಕಾಗಿರುವ ಅಂಶಗಳ ದೊಡ್ಡಪಟ್ಟಿ ನೀಡಲಾಗಿದೆ. ಹಾಗೇನಾದರೂ ಮಾಡಿದರೆ ಅದು ಮೋಪ್ಲಾ ಹತ್ಯಾಕಾಂಡದ ಸತ್ಯಗಳನ್ನೇ ಮುಚ್ಚಿಟ್ಟು, ಎಡಪಂಥೀಯರು ಪ್ರತಿಪಾದಿಸಿಕೊಂಡು ಬಂದಿರುವಂತೆ ಮೋಪ್ಲಾದಲ್ಲಾಗಿದ್ದು ಬಂಡಾಯವಷ್ಟೇ ಎಂಬ ಸುಳ್ಳು ವ್ಯಾಖ್ಯಾನವನ್ನೇ ಗಟ್ಟಿಗೊಳಿಸಿದಂತಾಗುತ್ತದೆ ಎಂಬುದು ನಿರ್ದೇಶಕರ ಅಳಲು.
ಪ್ರಾರಂಭದಲ್ಲಿ ಈ ಚಿತ್ರವನ್ನು ಕೇರಳದ ರಾಜ್ಯ ಸೆನ್ಸಾರ್ ಸಮಿತಿ ಆಕ್ಷೇಪಿಸಿ ಅದು ಸಿ ಬಿ ಎಫ್ ಸಿಗೆ ಹೋಯಿತು. ಸಿ ಬಿ ಎಫ್ ಸಿ ತನ್ನ ಮೊದಲ ಪರಾಮರ್ಶೆಯಲ್ಲಿ ಎ ಪ್ರಮಾಣಪತ್ರದೊಂದಿದೆ ಬಿಡುಗಡೆ ಮಾಡುವುದಕ್ಕೆ ಒಪ್ಪಿತ್ತು. ಆದರೆ ಎರಡನೇ ಪರಾಮರ್ಶೆ ನಡೆದು ಏಕಾಏಕಿ ಹಲವು ಕಟ್ ಗಳನ್ನು ಸೂಚಿಸಲಾಯಿತು ಎಂಬುದು ನಿರ್ದೇಶಕರು ಹೇಳುತ್ತಿರುವ ಸಂಗತಿ.
ಮೋಪ್ಲಾ ಹಿಂಸಾಚಾರ ಸಂದರ್ಭದಲ್ಲಿ ಮುಸ್ಲಿಮರು ಕೆಲವು ಪ್ರದೇಶಗಳನ್ನು ಕೇವಲ ಆ ಸಮುದಾಯಕ್ಕೆ ಮಾತ್ರವೇ ಸೀಮಿತವಾಗಿರಿಸಿದ್ದು ಹಾಗೂ ಉಳಿದ ಹಿಂದುಗಳಿಗೆ ಜಜಿಯಾ ಮಾದರಿಯಲ್ಲಿ ಹಣ ವಸೂಲು ಮಾಡುತ್ತಿದ್ದ ಅಂಶಗಳೆಲ್ಲ ದಾಖಲಾಗಿವೆ. ಆದರೆ ಇವನ್ನು ತೆರೆ ಮೇಲೆ ತೋರಿಸುವುದಕ್ಕೆ ಸೆನ್ಸಾರ್ ಸಮಿತಿ ಆಕ್ಷೇಪಿಸುತ್ತಿದೆ ಎಂಬ ಆರೋಪ ನಿರ್ದೇಶಕರಿಂದ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!