April 4, 2026
Saturday, April 4, 2026
spot_img

NCERT ಅಚಾತುರ್ಯಕ್ಕೆ ಕೇಂದ್ರದ ಕ್ಷಮೆಯಾಚನೆ: 8ನೇ ತರಗತಿ ಸಮಾಜ ವಿಜ್ಞಾನ ಪುಸ್ತಕಕ್ಕೆ ಸುಪ್ರೀಂ ನಿಷೇಧ

ಹೊಸದಿಗಂತ ಡಿಜಿಟಲ್ ಡೆಸ್ಕ್:

NCERT 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ “ನ್ಯಾಯಾಂಗದಲ್ಲಿ ಭ್ರಷ್ಟಾಚಾರ” ಎಂಬ ವಿವಾದಾತ್ಮಕ ಅಧ್ಯಾಯವನ್ನು ಸೇರಿಸಿರುವುದು ಸುಪ್ರೀಂ ಕೋರ್ಟ್‌ನ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಗಂಭೀರ ಲೋಪದ ಕುರಿತು ನ್ಯಾಯಾಲಯವು ‘ನ್ಯಾಯಾಂಗ ನಿಂದನೆ’ ನೋಟಿಸ್ ಜಾರಿಗೊಳಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಪಠ್ಯವನ್ನು ತಕ್ಷಣವೇ ಹಿಂಪಡೆಯುವ ನಿರ್ಧಾರ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, “ನಮ್ಮ ಸರ್ಕಾರಕ್ಕೆ ನ್ಯಾಯಾಂಗದ ಬಗ್ಗೆ ಅಪಾರ ಗೌರವವಿದೆ. ಯಾವುದೇ ಹಂತದಲ್ಲೂ ನ್ಯಾಯಾಲಯದ ಘನತೆಗೆ ಧಕ್ಕೆ ತರುವ ಉದ್ದೇಶ ನಮಗಿಲ್ಲ. ಪಠ್ಯದಲ್ಲಿ ಆದ ಅಚಾತುರ್ಯದ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಕ್ರಮಕ್ಕೆ ಆದೇಶಿಸಲಾಗಿದೆ,” ಎಂದು ತಿಳಿಸಿದ್ದಾರೆ.

ವಿವಾದಿತ ಅಧ್ಯಾಯವಿರುವ ಸಮಾಜ ವಿಜ್ಞಾನ ಪುಸ್ತಕದ ಮೇಲೆ ಸುಪ್ರೀಂ ಕೋರ್ಟ್ ಸಂಪೂರ್ಣ ನಿಷೇಧ ಹೇರಿದ್ದು, ಮಾರುಕಟ್ಟೆಯಲ್ಲಿರುವ ಮತ್ತು ಶಾಲೆಗಳಿಗೆ ಸರಬರಾಜಾಗಿರುವ ಎಲ್ಲಾ ಪ್ರತಿಗಳನ್ನು ವಾಪಸ್ ಪಡೆಯಲು NCERTಗೆ ಸೂಚಿಸಲಾಗಿದೆ.

ಈ ಸೂಕ್ಷ್ಮ ವಿಷಯವು ಪಠ್ಯದಲ್ಲಿ ಹೇಗೆ ಸೇರ್ಪಡೆಯಾಯಿತು ಮತ್ತು ಇದಕ್ಕೆ ಅನುಮೋದನೆ ನೀಡಿದವರು ಯಾರು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲು ಸಚಿವರು ಆದೇಶಿಸಿದ್ದಾರೆ.

ಈ ಪ್ರಮಾದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಸಚಿವರು, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !