ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಶೀಘ್ರದಲ್ಲೇ ಕೇಂದ್ರದಿoದ ಅನುಮೋದನೆ:ಸಚಿವ ಕೋಟ

ಹೊಸದಿಗಂತ ವರದಿ, ಮೈಸೂರು:

ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಗಳಿಗೆ ನೀಡಲಾಗುತ್ತಿದ್ದ ಮೀಸಲಾತಿಯಲ್ಲಿ ಹೆಚ್ಚಳವನ್ನು ಮಾಡಿದ್ದು, ಇದಕ್ಕೆ ಕೇಂದ್ರ ಸರ್ಕಾರದಿಂದ ಶೀಘ್ರದಲ್ಲೇ ಅನುಮೋದನೆಯನ್ನು ಪಡೆದುಕೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಸೋಮವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ, ಎಸ್ಟಿ ಸಮುದಾಯಗಳಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಹೆಚ್ಚಳ ಮಾಡುವ ಕುರಿತಂತೆ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಸರ್ಕಾರದ ನಿರ್ಧಾರಕ್ಕೆ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯನವರು ಬೆಂಬಲಿಸಿದ್ದರು. ಪ್ರಸ್ತಾವನೆಯನ್ನು ಸದನದಲ್ಲಿ ಮಂಡಿಸಿ, ಒಪ್ಪಿಗೆ ಪಡೆದುಕೊಂಡು, ಅದನ್ನು ಕಾನೂನಾತ್ಮಕವಾಗಿ ಜಾರಿಗೆ ತರುವಂತೆ ತಿಳಿಸಿದ್ದರು. ಆದರೆ ಈಗ ಮೀಸಲಾತಿ ಹೆಚ್ಚಳ ಗಿಮಿಕ್ ಎನ್ನುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಮೀಸಲಾತಿಯನ್ನು ಹೆಚ್ಚಳ ಮಾಡಿ, ಅದಕ್ಕೆ ಕಾನೂನಿನ ಬಲ ನೀಡುವ ಮೂಲಕ ಅನುಷ್ಠಾನಕ್ಕೆ ತಂದಿದೆ. ಇದಕ್ಕೆ ಕೇಂದ್ರದಿoದ ಅನುಮೋದನೆಯನ್ನು ಪಡೆದುಕೊಳ್ಳಬೇಕಾಗಿದೆ. ಹಾಗಾಗಿ ಶೀಘ್ರದಲ್ಲೇ ಕೇಂದ್ರಸರ್ಕಾರ ಮೀಸಲು ಹೆಚ್ಚಳಕ್ಕೆ ಅನುಮೋದನೆಯನ್ನು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯವರಿಗೆ ಎಸ್.ಸಿ., ಎಸ್.ಟಿ.ಸಮುದಾಯಗಳ ಬಗ್ಗೆ ಕಾಳಜಿಯಿಲ್ಲ ಎಂದು
ವಿಪಕ್ಷಗಳು ಹೇಳುತ್ತಿರುವ ಮಾತಿನಲ್ಲಿ ಯಾವುದೇ ಹುರುಳಿಲ್ಲ. ನಮ್ಮ ಯೋಜನೆಗಳ ಹೆಸರು ಹೇಳಿಕೊಂಡು ಅವರು ಪ್ರಚಾರ ಪಡೆಯುತ್ತಿದ್ದಾರೆ ಎಂದು ಟೀಕಿಸಿದರು.
ವಿಪಕ್ಷಗಳು ಆರೋಪಿಸುತ್ತಿರುವಂತೆ ಬಿಜೆಪಿ ಸರ್ಕಾರ ದಲಿತರ, ಹಿಂದುಳಿದವರ, ಅಲ್ಪ ಸಂಖ್ಯಾತರ ವಿರುದ್ಧವಾಗಿಲ್ಲ. ಅವರ ಪರವಾಗಿಯೂ ಹಲವು ಯೋಜನೆಗಳನ್ನು ಜಾರಿಗೆ ತಂದು ಸಮಗ್ರ ಅಭಿವೃದ್ಧಿಗೆ ಕಾರಣವಾಗಿದೆ. ಇದಕ್ಕೆ ಸರ್ಕಾರದ ಯೋಜನೆಗಳೇ ಸಾಕ್ಷಿಯಾಗಿವೆ ಎಂದು ತಿರುಗೇಟು ನೀಡಿದರು. ದಲಿತರಿಗೆ, ಹಿಂದುಳಿದವರಿಗೆ ಮತ್ತು ಅಲ್ಪಸಂಖ್ಯಾತರಿಗೆ ಬಿಜೆಪಿ ಸರ್ಕಾರ ಎಲ್ಲ ಸೌಲಭ್ಯಗಳನ್ನು
ಗಳನ್ನು ನೀಡುತ್ತಿದೆ ಎಂದು ಹೇಳಿದರು.
ಹಲವು ಸಚಿವರೊಂದಿಗೆ ಸ್ಯಾಂಟ್ರೋ ರವಿಸಂಪರ್ಕ ಹೊಂದಿದ್ದಾನೆ ಎಂದು ಕೇಳಿಬರುತ್ತಿರುವ ಆರೋಪಗಳ ಅಲ್ಲಗಳೆದರು. ಸ್ಯಾಂಟ್ರೋ ರವಿ ಜೊತೆ ಸಂಪರ್ಕ ಇರಿಸಿಕೊಂಡಿರುವವರ ಬಗ್ಗೆ ತನಿಖೆ ನಡೆಯಲಿ. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು.
ಬೂತ್ ವಿಜಯದ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೇವೆ; ರಾಜ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಬೂತ್ ವಿಜಯ್ ಅಭಿಯಾನವನ್ನು ಪಕ್ಷದಿಂದ ರಾಜ್ಯಾದ್ಯಾಂತ ನಡೆಸಲಾಗುತ್ತಿದೆ. ಮುಖ್ಯಮಂತ್ರಿಗಳು, ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳು ಈಗಾಗಲೇ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಶಾಸಕರು, ಸಂಸದರು, ಸಚಿವರು ತಮ್ಮ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಅಭಿಯಾನವನ್ನು ನಡೆಸುತ್ತಿದ್ದಾರೆ. ರಾಜ್ಯದಲ್ಲಿ 58,186 ಬೂತ್‌ಗಳಿಗೆ, 11,642 ಶಕ್ತಿಗಳು, 1445 ಮಹಾ ಶಕ್ತಿ ಕೇಂದ್ರಗಳಿವೆ. ಪ್ರತಿಬೂತ್‌ನಲ್ಲೂ ಪಕ್ಷದ ಸಂಘಟನೆಯನ್ನು ಮಾಡಿ,ಮತದಾರರ ಮನ ಮುಟ್ಟಿ, ಅವರ ಮನವೊಲೈಸುವ ಕೆಲಸ ನಡೆಯುತ್ತಿದೆ. ಅಲ್ಲದೇ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ, ಅದನ್ನು ಪರಿಹರಿಸುವ ಕೆಲಸಗಳೂ ನಡೆಯುತ್ತಿವೆ. ಪ್ರತಿಯೊಂದು ಬೂತ್‌ನಲ್ಲೂ ಪಕ್ಷ ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮೈಸೂರು ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಶಾಸಕ ಎಲ್.ನಾಗೇಂದ್ರ, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಸಹ ವಕ್ತಾರ ಕೇಬಲ್ ಮಹೇಶ್, ಪ್ರದೀಪ್ ಕುಮಾರ್, ಕೆ.ವಸಂತ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!