ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 8ನೇ ದಾಖಲೆಯ ಬಜೆಟ್ ಅನ್ನು (budget 2025) ಸಂಸತ್ತಿನಲ್ಲಿ ನಾಳೆ (ಫೆ. 1) ಮಂಡಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 3.0 ಅಧಿಕಾರಕ್ಕೆ ಬಂದ ನಂತರ ಇದು 2ನೇ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಆಗಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಹೊಸ ಬಜೆಟ್ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ.ಬಜೆಟ್‌ನಲ್ಲಿರುವ ಘೋಷಣೆಗಳು ಪ್ರತಿಯೊಬ್ಬ ದೇಶವಾಸಿಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯಿಂದ ಹಿಡಿದು ಆದಾಯ ತೆರಿಗೆವರೆಗೆ ಎಲ್ಲವೂ ಬಜೆಟ್ ಘೋಷಣೆಯ ಆಧಾರದ ಮೇಲೆ ಬದಲಾಗಬಹುದು.
ದಿನ ನಿತ್ಯ ಬಳಕೆ ವಸ್ತುಗಳಿಂದ ಹಿಡಿದು, ಆಟೋಮೊಬೈಲ್, ಗ್ಯಾಜೆಟ್ಸ್ ಸೇರಿ ಎಲ್ಲಾ ವಸ್ತುಗಳ ಬೆಲೆ ಬಜೆಟ್ ಮೇಲೆ ಅವಲಂಬಿತವಾಗಿರುತ್ತದೆ. ಪ್ರಮುಖವಾಗಿ ತೆರಿಗೆ ವಿಚಾರದಲ್ಲಿನ ಬದಲಾವಣೆ ಈ ಬೆಲೆ ಏರಿಳತಕ್ಕೆ ಕಾರಣವಾಗಲಿದೆ.
ಫೆಬ್ರವರಿ 1, 2025 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುವಾಗ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಗೆ ಅಗತ್ಯವಾದ ವಸ್ತುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವುದಾಗಿ ಘೋಷಿಸಿದರೆ, ಎಲ್ಲಾ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ.
ಇನ್ನು 2024-25ರ ಆರ್ಥಿಕ ಸಮೀಕ್ಷೆಯ ಪ್ರಕಾರ, ನೀವು ಚಿನ್ನಾಭರಣ ಖರೀದಿ ಯೋಜನೆ ಕಾರ್ಯಗತಗೊಳಿಸಲು ಈ ವರ್ಷ ಅತ್ಯುತ್ತಮವಾಗಿದೆ. 2025ರಲ್ಲಿ ಚಿನ್ನದ ಬೆಲೆಗಳು ಕಡಿಮೆಯಾಗಬಹುದು ಮತ್ತು ಬೆಳ್ಳಿ ಬೆಲೆಗಳು ಗಗನಕ್ಕೇರಬಹುದು ಎಂದು ಸಮೀಕ್ಷೆಯು ಭವಿಷ್ಯ ನುಡಿದಿದೆ.
ವರದಿಯ ಪ್ರಕಾರ, ತೈಲ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆಯಾಗಲಿದ್ದು, ನೈಸರ್ಗಿಕ ಅನಿಲದ ಬೆಲೆ ಹೆಚ್ಚಳವಾಗಲಿದೆ. ಜೊತೆಗೆ ಲೋಹಗಳು ಮತ್ತು ಕೃಷಿ ಕಚ್ಚಾ ವಸ್ತುಗಳ ಬೆಲೆ ಸ್ಥಿರವಾಗಿರುವ ನಿರೀಕ್ಷೆ ಇದೆ. ಕಬ್ಬಿಣದ ಅದಿರು ಮತ್ತು ಸತು ಬೆಲೆಗಳಲ್ಲಿನ ಇಳಿಕೆಯಿಂದಾಗಿ ಲೋಹಗಳು ಮತ್ತು ಖನಿಜಗಳ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಪ್ರಮಾಣ ಕಡಿಮೆಯಾಗಿದ್ದು, ದೇಶೀಯ ಹಣದುಬ್ಬರ ಧನಾತ್ಮಕ ದೃಷ್ಟಿಕೋನ ಹೊಂದಿರಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಚಿನ್ನದ ಬೆಲೆಯಲ್ಲಿನ ಯೋಜಿತ ಕುಸಿತವು ಹೂಡಿಕೆದಾರರ ಮೇಲೆ ಪರಿಣಾಮ ಬೀರಬಹುದು, ಅದೇ ರೀತಿ ಬೆಳ್ಳಿಯ ಬೆಲೆಯಲ್ಲಿ ನಿರೀಕ್ಷಿತ ಏರಿಕೆಯು ಹೂಡಿಕೆದಾರರ ಸರಿದೂಗಿಸಿಕೊಳ್ಳಲು ನೆರವಾಗಬಹುದು ಎಂದಿದೆ. ಜಾಗತಿಕ ಅನಿಶ್ಚಿತತೆ ಹೆಚ್ಚಳವಾಗಿರುವುದು ವಿದೇಶಿ ವಿನಿಮಯ ಮೀಸಲುಗಳ ಸಂಯೋಜನೆ ಏರಿಳಿತಗಳಿಗೆ ಕಾರಣವಾಗಿದೆ. 2ನೇ ವಿಶ್ವಯುದ್ಧದ ಬಳಿಕ ಚಿನ್ನದ ಗಟ್ಟಿ ಬೆಲೆ ಅತ್ಯಧಿಕ ಮಟ್ಟವನ್ನು ಕಂಡಿತು. ದೇಶಗಳು ಚಿನ್ನದ ಸಂಗ್ರಹ ಹೆಚ್ಚಿಸಿಕೊಳ್ಳುವ ಮೂಲಕ ಇದು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಚಿನ್ನದ ಬೆಲೆಯಲ್ಲಿನ ಯೋಜಿತ ಕುಸಿತವು ಹೂಡಿಕೆದಾರರ ಭಾವನೆಯ ಮೇಲೆ ಪ್ರಭಾವ ಬೀರುತ್ತದೆ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿರೀಕ್ಷಿತ ಏರಿಕೆಯು ಷೇರು ಮಾರುಕಟ್ಟೆಗೆ ಸ್ವಲ್ಪ ಬೆಂಬಲವನ್ನು ನೀಡಬಹುದು ಎಂದು ಸಮೀಕ್ಷೆಯು ಗಮನಿಸಿದೆ. ಜಾಗತಿಕ ಬೆಳವಣಿಗೆಗಳ ನಡುವೆ ತಜ್ಞರು ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದಾರೆ. ಏಕೆಂದರೆ ಅವರು ಜಾಗತಿಕವಾಗಿ ಯಾವುದೇ ಕೆಳಮುಖ ಪ್ರವೃತ್ತಿ ನಿರೀಕ್ಷಿಸುವುದಿಲ್ಲ. ಭಾರತ ಸರ್ಕಾರವು ಬಜೆಟ್‌ನಲ್ಲಿ ಕೆಲವು ಕ್ರಮಗಳನ್ನು ಕೈಗೊಂಡರೆ ಚಿನ್ನದ ಬೆಲೆಗಳು ಕಡಿಮೆಯಾಗಬಹುದು ಎಂದು ಅವರೆಲ್ಲ ಅಭಿಪ್ರಾಯಪಟ್ಟಿದ್ದಾರೆ.