September 1, 2026
Tuesday, September 1, 2026
spot_img

ಕೊಂಕಣ ರೈಲ್ವೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

ಹೊಸದಿಗಂತ ವರದಿ ಹೊನ್ನಾವರ:

ಕೊಂಕಣ ರೈಲ್ವೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದ್ದು ಉತ್ತರ ಕನ್ನಡ ಜಿಲ್ಲೆಯ ರೈಲ್ವೆ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ವಿಶೇಷ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರು.

ಜಿಲ್ಲೆಯ ಹೊನ್ನಾವರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಭಾರತೀಯ ರೈಲ್ವೆ ಜತೆ ಕೊಂಕಣ ರೈಲ್ವೆಯ ವಿಲೀನ ಕಾರ್ಯಕ್ಕೆ ಚಿಂತನೆಗಳು ನಡೆದಿದ್ದು, ಈ ವಿಷಯವಾಗಿ ಕೇರಳ, ಮಹಾರಾಷ್ಟ್ರ, ಗೋವಾ, ರಾಜ್ಯಗಳ ಒಮ್ಮತದ ತೀರ್ಮಾನ ಆಗಬೇಕಿದೆ ಆದರೆ ತಾವು ಕೇಂದ್ರ ಸರ್ಕಾರಕ್ಕೆ ಕೊಂಕಣ ರೈಲ್ವೆಯ ಅಭಿವೃದ್ಧಿ ಕುರಿತಂತೆ ಮನವಿ ಮಾಡಿದ್ದರಿಂದ ಸುಮಾರು 7 ಸಾವಿರ ಕೋಟಿಗಳಷ್ಟು ಅನುದಾನ ಮಂಜೂರಾತಿಯ ಹಂತದಲ್ಲಿದೆ ಎಂದು ತಿಳಿಸಿದರು.

ಕೊಂಕಣ ರೈಲ್ವೆಯ ಅಭಿವೃದ್ಧಿಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸೋಮಣ್ಣ ಅವರಲ್ಲಿ ನಿರಂತರವಾಗಿ ಮನವಿ ಮಾಡಿದ್ದರಿಂದ ಕೆಲವೇ ದಿನಗಳಲ್ಲಿ ಸರ್ಕಾರದ ಮಂಜೂರಾತಿ ಸಿಗಲಿದ್ದು ಈ ವಿಷಯವಾಗಿ ಕೊಂಕಣ ರೈಲ್ವೆಯ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಜಾವ್ ಅವರ ವಿಶೇಷ ಸಹಕಾರವಿದೆ ಎಂದ ಸಂಸದರು ಮುಂದಿನ ದಿನಗಳಲ್ಲಿ ಅಗತ್ಯತೆ ಇರುವಲ್ಲಿ ಡಬಲ್ ಟ್ರಾಕ್, ಹೆಚ್ಚುವರಿ ಪ್ಲಾಟ್ ಪಾರ್ಮ್, ಸುರಂಗ ಮಾರ್ಗಗಳ ಸುಧಾರಣೆ ಮೊದಲಾದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ:

ಈಗಾಗಲೇ ಕುಮಟಾ ಮತ್ತು ಗೋಕರ್ಣಗಳಲ್ಲಿ ಎರಡನೆಯ ಪ್ಲಾಟ್ ಪಾರ್ಮ್ ನಿರ್ಮಾಣ ಮಾಡಲಾಗಿದೆ, ಮುರ್ಡೇಶ್ವರ, ಭಟ್ಕಳ, ಕಾರವಾರ ರೈಲ್ವೆ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯ ನಡೆದಿದೆ ಮುಂದಿನ ದಿನಗಳಲ್ಲಿ ವಿವಿಧ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಸಂಸದ ಕಾಗೇರಿ ತಿಳಿಸಿದರು.

ಈ ವೇಳೆ ಕುಮಟಾ ಶಾಸಕ ದಿನಕರ ಶೆಟ್ಟಿ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !