ಖಾಲಿ ಚೊಂಬು ಬಿಟ್ಟರೆ ಕೇಂದ್ರ ಸರ್ಕಾರ ಬೇರೆ ಏನೂ ಕೊಟ್ಟಿಲ್ಲ: ರಾಹುಲ್ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ನರೇಂದ್ರ ಮೋದಿಯವರ ಭಾರತೀಯ ಚೊಂಬು ಪಾರ್ಟಿಯಿಂದ ಜನರಿಗೆ ಖಾಲಿ ಚೊಂಬು ಅಲ್ಲದೇ ಮತ್ತೇನೂ ಸಿಕ್ಕಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದರು.

ಬಳ್ಳಾರಿಯಲ್ಲಿ ಶುಕ್ರವಾರ ಕಾಂಗ್ರೆಸ್‌ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು , ಕರ್ನಾಟಕ ರಾಜ್ಯ ಸರ್ಕಾರವು ಬರ ಪರಿಹಾರ ಕೇಳಿದಾಗಲೂ ಖಾಲಿ ಚೊಂಬು ಬಿಟ್ಟರೆ ಕೇಂದ್ರ ಸರ್ಕಾರ ಬೇರೆ ಏನೂ ಕೊಟ್ಟಿಲ್ಲ ಎಂದು ವ್ಯಂಗ್ಯವಾಡಿದರು.

ಕರ್ನಾಟಕ ರಾಜ್ಯ ಸರ್ಕಾರವು ದೇಶಕ್ಕೆ ತೆರಿಗೆ ರೂಪದಲ್ಲಿ ₹ 100 ಕೊಟ್ಟರೆ, ₹ 13 ಅಷ್ಟೇ ವಾಪಸ್ ಬರುತ್ತದೆ. ರಾಜ್ಯಕ್ಕೆ ಬೇರೆ ಬೇರೆ ಸ್ವರೂಪದಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದರು.

ಬಡವರಿಗೆ, ದುರ್ಬಲರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಸೇರಿದಂತೆ ಎಲ್ಲಾ ಸಮುದಾಯದವರಿಗೆ ಅಧಿಕಾರ ಮತ್ತು ಹಕ್ಕು ಕಲ್ಪಿಸಿರುವ ದೇಶದ ಸಂವಿಧಾನವನ್ನು ನಾಶ ಮಾಡಿಸಲು ಬಿಜೆಪಿ ಹುನ್ನಾರ ನಡೆಸಿದೆ. ಆದರೆ, ಸಂವಿಧಾನವನ್ನು ನಾಶ ಮಾಡುವಂತಹ ಶಕ್ತಿ ವಿಶ್ವದಲ್ಲಿಯೇ ಇಲ್ಲ ಎಂದರು.

ಮೋದಿಯವರು ದೇಶದ 20ಕ್ಕೂ ಹೆಚ್ಚು ಕೋಟ್ಯಾಧೀಶರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಹೊರತು ರೈತರ ಸಾಲ ಮನ್ನಾ ಮಾಡಿಲ್ಲ. ನಮ್ಮ ಕಾಂಗ್ರೆಸ್‌ ಮತ್ತು ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ, ನಿಶ್ಚಿತವಾಗಿ ರೈತರ ಸಾಲ ಮನ್ನಾ ಮಾಡಲಿದೆ. ಬೆಳೆಗಳಿಗೆ ವೈಜ್ಞಾನಿಕ ಕನಿಷ್ಠ ಬೆಂಬಲ ಬೆಲೆಯೂ ನಿಗದಿಪಡಿಸಲಿದೆ ಎಂದರು.

ದೇಶದಲ್ಲಿ ವ್ಯಾಪಿಸಿರುವ ನಿರುದ್ಯೋಗ ಸಮಸ್ಯೆ ಕೊನೆಗಾಣಿಸಲು ಆದ್ಯತೆ ನೀಡಲಾಗುವುದು. ಪದವಿ ಮುಗಿದ ಕೂಡಲೇ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ ಅಗತ್ಯ ಕೌಶಲ ತರಬೇತಿ ನೀಡುತ್ತೇವೆ. ಯುವಜನರಿಗೆ ಅಗತ್ಯ ಆರ್ಥಿಕ ನೆರವನ್ನು ಒದಗಿಸಿ, ಬದುಕು ಕಟ್ಟಿಕೊಳ್ಳಲು ಪ್ರೋತ್ಸಾಹಿಸುತ್ತೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!