ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ವಿಧಾನಸಭೆ ಚುನಾವಣೆಗೆ ಇಂದು ಕೇಂದ್ರ ಚುನಾವಣಾ ಆಯೋಗವು ದಿನಾಂಕ ಘೋಷಿಸಿದೆ.
ಏತನ್ಮಧ್ಯೆ ದೆಹಲಿಯ ಆಪ್ ಸರ್ಕಾರದ ಮುಖ್ಯಮಂತ್ರಿ ಆತಿಶಿ ಅವರು ಕೇಂದ್ರ ಸರ್ಕಾರದ ಮೇಲೆ ಗಂಭೀರವಾದ ಆರೋಪ ಮಾಡಿದ್ದಾರೆ.
ಸೋಮವಾರ ರಾತ್ರಿ ತನಗೆ ಮುಖ್ಯಮಂತ್ರಿಗಳ ನಿವಾಸವನ್ನು ಖಾಲಿ ಮಾಡುವಂತೆ ಬಿಜೆಪಿ ನೆತೃತ್ವದ ಕೇಂದ್ರ ಸರ್ಕಾರದಿಂದ ಆದೇಶ ಬಂದಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕೇಂದ್ರ ಚುನಾವಣಾ ಆಯೋಗವು ಚುನಾವಣೆಗೆ ಅಧಿಸೂಚನೆ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಈ ಹೇಳಿಕೆ ಬಂದಿದೆ.
ಭಾರತೀಯ ಚುನಾವಣಾ ಆಯೋಗ (ಇಸಿಐ) ಮಂಗಳವಾರ ದೆಹಲಿ ವಿಧಾನಸಭೆಗೆ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದ ನಂತರ, ಆಮ್ ಆದ್ಮಿ ಪಕ್ಷವು ಪತ್ರಿಕಾಗೋಷ್ಠಿಯನ್ನು ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತು.
ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಶೀಶ್ ಮಹಲ್ ನವೀಕರಣಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದ ಕಾರಣ ಕೇಂದ್ರ ಸರ್ಕಾರವು ಮುಖ್ಯಮಂತ್ರಿಗಳಿಗೆ ನೀಡಿದ್ದ ಅಧಿಕೃತ ನಿವಾಸವನ್ನು ರದ್ದು ಮಾಡಿ ಆದೇಶ ಮಾಡಿದೆ.
ದೆಹಲಿ ಚುನಾವಣೆಯ ವೇಳಾಪಟ್ಟಿಯನ್ನು ಆಯೋಗವು ಇಂದು ಪ್ರಕಟಿಸಿದೆ. ಆದರೆ ಕಳೆದ ರಾತ್ರಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನನ್ನ ಮೂರು ತಿಂಗಳ ಅವಧಿಯಲ್ಲಿ ವಾಸವಾಗಿರುವ ನನ್ನ ಅಧಿಕೃತ ನಿವಾಸದಿಂದ ಹೊರಹಾಕಿದೆ. ಕೇಂದ್ರವು ಪತ್ರದ ಮೂಲಕ ಸಿಎಂ ನಿವಾಸದ ಹಂಚಿಕೆಯನ್ನು ರದ್ದುಗೊಳಿಸಿದರು. ಈ ಮೂಲಕ ಚುನಾಯಿತ ಸರ್ಕಾರದ ಚುನಾಯಿತ ಮುಖ್ಯಮಂತ್ರಿಯಿಂದ ನಿವಾಸವನ್ನು ಕಿತ್ತುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕಳೆದ ಮೂರು ತಿಂಗಳ ನನ್ನ ಅವಧಿಯಲ್ಲಿ ಅಧಿಕೃತ ನಿವಾಸದಿಂದ ಅವರು, ನನನ್ನು ರಸ್ತೆಗೆ ಎಸೆದರು. ನಾನು ಮುಖ್ಯಮಂತ್ರಿಯಾಗಿ ನಿರ್ವಹಿಸ ಬೇಕಿದ್ದ ಅಧಿಕಾರಗಳಿಗೆ ಸದಾ ತಕಾರಾರೂ ತೆಗೆಯುತ್ತಿದ್ದರು. ಅವರು ನನ್ನ ಅಧಿಕೃತ ನಿವಾಸವನ್ನು ಕಿತ್ತುಕೊಳ್ಳ ಬಹುದು, ನನ್ನ ಅಧಿಕಾರಕ್ಕೆ ಮೊಟಕುಗೊಳಿಸಬಹುದು, ಆದರೆ ದೆಹಲಿ ಜನರಿಗಾಗಿ ಕೆಲಸ ಮಾಡುವುದನ್ನು ಅವರಿಂದ ನಿಲ್ಲಿಸಲು ಸಾಧ್ಯವಿಲ್ಲ ಎಂದರು.
ಬಿಜೆಪಿಯಿಂದ ಟೀಕೆ
ಅತಿಶಿ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಅಕ್ಟೋಬರ್‌ನಲ್ಲಿ ಅವರಿಗೆ ಸಿಎಂ ಬಂಗಲೆ ಮಂಜೂರು ಮಾಡಲಾಗಿತ್ತು ಆದರೆ ಅವರು ಎಂದಿಗೂ ಶೀಫ್ಟ್ ಆಗಲಿಲ್ಲ, ಆದ್ದರಿಂದ ನಿವಾಸದ ಹಂಚಿಕೆಯನ್ನು ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ಧಾಗಿ ಹೇಳಿದೆ.