ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದಲ್ಲಿ ಭುಗಿಲೆದ್ದಿರುವ ದಂಗೆಯಲ್ಲಿ ಅಲ್ಪಸಂಖ್ಯಾತ ಹಿಂದು ಗಳ ಮೇಲೆ ಕಿಡಿಗೇಡಿಗಳು ದಾಳಿ ನಡೆಸುತ್ತಿದ್ದು, ದಿನೇ ದಿನೇ ನರಕಯಾತನೆ ಅನುಭವಿಸುವಂತಾಗಿದೆ. ಹಿಂದುಗಳಿಗೆ ಸಂಬಂಧಿಸಿದ ಮನೆ ಅಂಗಡಿಗಳನ್ನು ಮತ್ತು ದೇಗುಲಗಳನ್ನು ಕಿಡಿಗೇಡಿಗಳು ಪುಡಿಗಟ್ಟಿದ್ದಾರೆ. ಕೈಗೆ ಸಿಕ್ಕವಸ್ತುಗಳನ್ನು ದೋಚುತ್ತಿದ್ದಾರೆ. ಇದೀಗ ಬಾಂಗ್ಲಾದೇಶದ ಖ್ಯಾತ ಗಾಯಕನ ಮನೆಗೆ ಪ್ರತಿಭಟನಾಕಾರರು ಬೆಂಕಿ ಇಟ್ಟಿದ್ದಾರೆ.
ಬಾಂಗ್ಲಾದೇಶದ ಖ್ಯಾತ ಗಾಯಕ ರಾಹುಲ್ ಆನಂದ್ಅವರ ಢಾಕಾದ ಧನ್ಮೋಂಡಿಯಲ್ಲಿದ್ದಂತಹ ಮನೆಯನ್ನು ಲೂಟಿ ಮಾಡಿ ಅದಕ್ಕೆ ಬೆಂಕಿ ಹಚ್ಚಲಾಗಿದೆ. ಸೋಮವಾರದಂದು ಈ ಘಟನೆ ನಡೆದಿದ್ದು ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗಿವೆ. ಪ್ರತಿಭಟನಾಕಾರರು ಗೇಟ್ ಮುರಿದು ನಂತರ ಮನೆಯಲ್ಲಿದ್ದ ವಸ್ತುಗಳನ್ನು ಒಡೆದು ಹಾಕಲಾರಂಭಿಸಿದ್ದರು.
ದುಷ್ಕರ್ಮಿಗಳ ಹಚ್ಚಿದ ಬೆಂಕಿಗೆ ರಾಹುಲ್ ಆನಂದ್ ಅವರ ಮನೆಯಲ್ಲಿದ್ದ 3000ಕ್ಕೂ ಅಧಿಕ ಸಂಗೀತೋಪಕರಣಗಳು ಬೆಂಕಿಗಾಹುತಿಯಾಗಿವೆ. ಇನ್ನು ಕಿಡಿಗೇಡಿಗಳು ರಾಹುಲ್ ಆನಂದ್ ಮನೆಯಲ್ಲಿದ್ದ ಪೀಠೋಪಕರಣಗಳು, ಕನ್ನಡಿಗಳು ಸೇರಿದಂತೆ ಮನೆಯಲ್ಲಿದ್ದಂತಹ ದುಬಾರಿ ವಸ್ತುಗಳನ್ನೆಲ್ಲ ಕೊಂಡೊಯ್ದಿದ್ದಾರೆ. ಈ ಮನೆಯು ಸುಮಾರು 140 ವರ್ಷ ಹಳೆಯದ್ದಾಗಿತ್ತು. ರಾಹುಲ್ ಆನಂದ್ ಅವರು ಜಾನಪದ ಬ್ಯಾಂಡ್ ನಡೆಸುತ್ತಿದ್ದು ಇದಕ್ಕೆ ಜೋಲರ್ ಗಾನ್ ಎಂದು ಹೆಸರಿಟ್ಟಿದ್ದರು. ಇದೀಗ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಇಡೀ ಪರಂಪರೆಯೇ ನಾಶವಾಗಿದೆ.
ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಶೇಖ್ ಹಸೀನಾ ದೇಶದಿಂದ ಪಲಾಯಣ ಮಾಡಿರುವ ಬೆನ್ನಲ್ಲೇ ಹಿಂದುಗಳನ್ನು ಗುರಿಯಾಗಿ ಎಗ್ಗಿಲ್ಲದೇ ದಾಳಿ ನಡೆಯುತ್ತಿದೆ. ಸಾಲದೆನ್ನುವಂತೆ ಉದ್ರಿಕ್ತ ಪ್ರತಿಭಟನಾಕಾರರು ಹಿಂದೂ ದೇಗುಲಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.