ದಿಗಂತ ವರದಿ, ಮಡಿಕೇರಿ:
ಕೇಂದ್ರೀಯ ವಿದ್ಯಾಲಯ ಮತ್ತು ಸೈನಿಕ ಶಾಲೆಯಲ್ಲಿ ಅರೆಸೇನಾ ಪಡೆಯ ನಿವೃತ್ತ ಯೋಧರ ಮಕ್ಕಳಿಗೆ ಮೀಸಲಾತಿ ನೀಡಬೇಕೆಂದು ಅರೆಸೇನಾ ಪಡೆಯ ನಿವೃತ್ತ ಯೋಧರ ಒಕ್ಕೂಟ ಒತ್ತಾಯಿಸಿದೆ.
ನಗರದಲ್ಲಿ ಒಕ್ಕೂಟದ ಅಧ್ಯಕ್ಷ ಎಂ.ಜಿ.ಯತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ವಿವಿಧ ಬೇಡಿಕೆಗಳ ಕುರಿತು ಜಿಲ್ಲಾಡಳಿತದ ಗಮನ ಸೆಳೆಯಲು ನಿರ್ಧರಿಸಲಾಯಿತು.
ಎಲ್ಲಾ ಸೈನಿಕರಂತೆ ನಾವು ಕೂಡ ಸೇವೆಯಲ್ಲಿದ್ದಾಗ ದೇಶವನ್ನು ಕಾಯುವ ಕಾರ್ಯ ಮಾಡಿದ್ದೇವೆ. ಆದರೆ ನಿವೃತ್ತಿ ವೇತನ ನೀಡುವ ಸಂದರ್ಭ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಪ್ರಮುಖರು ಬೇಸರ ವ್ಯಕ್ತಪಡಿಸಿದರು.
ಎಲ್ಲಾ ನಿವೃತ್ತ ಯೋಧರಿಗೆ ನೀಡುವ ಸೌಲಭ್ಯಗಳನ್ನು ಅರೆಸೇನಾ ಪಡೆಯ ನಿವೃತ್ತ ಯೋಧರಿಗೂ ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು. ಸೈನಿಕ ಇಲಾಖೆ ಮೂಲಕ ನಮಗೆ ಕಲ್ಪಿಸಿರುವ ಕ್ಯಾಂಟೀನ್ ಸೌಲಭ್ಯ ಬೆಂಗಳೂರಿನಲ್ಲಿದ್ದು, ಇದರ ಶಾಖೆಯನ್ನು ಮಡಿಕೇರಿಯಲ್ಲಿ ಆರಂಭಿಸಬೇಕು. ಬೆಂಗಳೂರಿಗೆ ಹೋಗಿ ಬರಲು ತೊಂದರೆಯಾಗುತ್ತಿರುವುದಲ್ಲದೆ ಪ್ರಯಾಣ ವೆಚ್ಚ ದುಬಾರಿಯಾಗುತ್ತಿದೆ. ನಮ್ಮ ಮಕ್ಕಳಿಗೂ ಉನ್ನತ ಶಿಕ್ಷಣವನ್ನು ನೀಡುವ ಉತ್ಸಾಹ ನಮ್ಮಲ್ಲಿದ್ದು, ಕೇಂದ್ರೀಯ ವಿದ್ಯಾಲಯ ಮತ್ತು ಸೈನಿಕ ಶಾಲೆಯಲ್ಲಿ ಮೀಸಲಾತಿ ನೀಡಬೇಕು.
ಒಕ್ಕೂಟದಲ್ಲಿ ಒಂದು ಸಾವಿರಕ್ಕೂ ಅಧಿಕ ಸದಸ್ಯರಿದ್ದು, ನ್ಯಾಯೋಚಿತ ಬೇಡಿಕೆಗಳಿಗೆ ಆಡಳಿತ ವ್ಯವಸ್ಥೆಯಿಂದ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಎಂ.ಜಿ.ಯತೀಶ್ ಎಚ್ಚರಿಕೆ ನೀಡಿದರು.
ಉಪಾಧ್ಯಕ್ಷ ಪಿ.ಎಂ.ಚoಗಪ್ಪ, ಕಾರ್ಯದರ್ಶಿ ನೂರೆರ ಭೀಮಯ್ಯ, ವೀರಾಜಪೇಟೆ ತಾಲೂಕು ಅಧ್ಯಕ್ಷ ಎಂ.ಕೆ.ಅಪ್ಪಯ್ಯ, ಸೋಮವಾರಪೇಟೆ ಅಧ್ಯಕ್ಷ ಸಿ.ಕೆ.ರಾಜು ಮತ್ತಿತರ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಕೊರವೇ ಬೆಂಬಲ: ಸಭೆಯಲ್ಲಿ ಉಪಸ್ಥಿತರಿದ್ದ ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಮಾತನಾಡಿ ನಮ್ಮ ಸಂಘಟನೆ ಅರೆಸೇನಾ ಪಡೆಯ ನಿವೃತ್ತ ಯೋಧರ ಹೋರಾಟಕ್ಕೆ ಬೆಂಬಲ
ಸೂಚಿಸಲಿದೆ ಎಂದರು.