October 3, 2026
Saturday, October 3, 2026
spot_img

ರಾಜ್ಯಕ್ಕೆ ಬಂದಿಳಿದ ಕೇಂದ್ರ ತಂಡ: ಉನ್ನತ ಅಧಿಕಾರಿಗಳೊಂದಿಗೆ ಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಸಭೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ತಲೆದೋರಿರುವ ತೀವ್ರ ಮಳೆ ಅಭಾವ ಮತ್ತು ಬೆಳೆ ಹಾನಿಯ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಕೇಂದ್ರ ಸರ್ಕಾರದ ಅಂತರ-ಸಚಿವಾಲಯದ ಉನ್ನತ ಮಟ್ಟದ ಸಮಿತಿಯೊಂದಿಗೆ ಬೆಂಗಳೂರಿನಲ್ಲಿ ಮಹತ್ವದ ಆಲೋಚನೆ ನಡೆಸಿದ್ದಾರೆ.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಈ ಕೇಂದ್ರ ತಂಡವು, ರಾಜ್ಯದ ವಾಸ್ತವ ಸ್ಥಿತಿಯನ್ನು ಅರಿಯಲು ಹಾಗೂ ರೈತರು ಎದುರಿಸುತ್ತಿರುವ ನಷ್ಟದ ಪ್ರಮಾಣವನ್ನು ಮೌಲ್ಯೀಕರಿಸಲು ರಾಜ್ಯಕ್ಕೆ ಆಗಮಿಸಿದೆ.

ಉನ್ನತ ಅಧಿಕಾರಿಗಳ ತಂಡ ಭಾಗಿ

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಈ ಉನ್ನತ ಮಟ್ಟದ ಸಭೆಯಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಿಎಂ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್ ಸೇರಿದಂತೆ ಕಂದಾಯ, ಹಣಕಾಸು ಹಾಗೂ ವಿಪತ್ತು ನಿರ್ವಹಣಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಭಾಗವಹಿಸಿ ರಾಜ್ಯದ ಪರಿಸ್ಥಿತಿಯನ್ನು ಕೇಂದ್ರ ತಂಡದ ಮುಂದೆ ಬಿಚ್ಚಿಟ್ಟರು.

ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ

ಮತ್ತೊಂದೆಡೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ತುರ್ತು ಪತ್ರ ಬರೆದಿದ್ದಾರೆ. ‘ಕರ್ನಾಟಕವು ಅತ್ಯಂತ ಭೀಕರ ಬರಗಾಲವನ್ನು ಎದುರಿಸುತ್ತಿದ್ದು, ಲಕ್ಷಾಂತರ ರೈತ ಕುಟುಂಬಗಳು ಸಂಕಷ್ಟದಲ್ಲಿವೆ. ಹೀಗಾಗಿ ಕೇಂದ್ರ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಪರಿಹಾರ ಬಿಡುಗಡೆ ಮಾಡಬೇಕು’ ಎಂದು ಖರ್ಗೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.

3,705 ಕೋಟಿ ಪರಿಹಾರಕ್ಕೆ ಬೇಡಿಕೆ

ವರದಿಗಳ ಪ್ರಕಾರ, ರಾಜ್ಯದಲ್ಲಿ ಸದ್ಯಕ್ಕೆ ಸುಮಾರು 18,748.23 ಕೋಟಿ ರೂಪಾಯಿಗಳ ಭಾರಿ ಬೆಳೆ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿ (NDRF-SDRF) ಅಡಿಯಲ್ಲಿ 3,705.30 ಕೋಟಿ ರೂಪಾಯಿಗಳ ತುರ್ತು ಆರ್ಥಿಕ ನೆರವನ್ನು ಒದಗಿಸುವಂತೆ ಕರ್ನಾಟಕ ಸರ್ಕಾರ ಕೇಂದ್ರವನ್ನು ಕೋರಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೂ ಪ್ರತ್ಯೇಕ ಕೇಂದ್ರ ತಂಡವನ್ನು ಕಳುಹಿಸಿ ನಷ್ಟದ ಸಮೀಕ್ಷೆ ನಡೆಸಬೇಕು ಎಂದು ಖರ್ಗೆ ಪ್ರಧಾನಿ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:

177 ತಾಲ್ಲೂಕುಗಳು ಬರಪೀಡಿತ

ರಾಜ್ಯ ಸರ್ಕಾರವು ಈಗಾಗಲೇ 177 ತಾಲ್ಲೂಕುಗಳನ್ನು ಅಧಿಕೃತವಾಗಿ ಬರಪೀಡಿತ ಎಂದು ಘೋಷಿಸಿದೆ. ಉಳಿದ 11 ಜಿಲ್ಲೆ/ತಾಲ್ಲೂಕುಗಳಲ್ಲಿ ಸದ್ಯ ಜಂಟಿ ಸಮೀಕ್ಷೆ ಪ್ರಗತಿಯಲ್ಲಿದೆ. ಇದರೊಂದಿಗೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇನ್‌ಪುಟ್ ಸಬ್ಸಿಡಿ ವಿತರಿಸಲು ಹಳೆಯ 2015-16ರ ಕೃಷಿ ಗಣತಿಯ ಬದಲಾಗಿ, ಕರ್ನಾಟಕದ ನವೀಕೃತ ‘ಭೂಮಿ’ ತಂತ್ರಾಂಶದ ದಾಖಲೆಗಳನ್ನೇ ಮಾನದಂಡವಾಗಿ ಬಳಸಬೇಕು, ಇದರಿಂದ ಅರ್ಹ ರೈತರು ಪರಿಹಾರದಿಂದ ವಂಚಿತರಾಗುವುದಿಲ್ಲ ಎಂದು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಾಗಿದೆ.

Must Read