ವಿಶ್ವ ಹತ್ತಿ ದಿನ: ಇತಿಹಾಸ, ಮಹತ್ವ, ವಿಶೇಷತೆಯೇನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಾಗತಿಕವಾಗಿ ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಸಸ್ಯ ಉತ್ಪನ್ನವೆಂದರೆ ಅದು ಹತ್ತಿ, ಜವಳಿ ಉದ್ಯಮದಲ್ಲಿ ಪ್ರಮುಖ ಪಾತ್ರ ವಹಿಸುವ ಈ ಹತ್ತಿ ವೈದ್ಯಕೀಯ ಕ್ಷೇತ್ರ, ಖಾದ್ಯ ತೈಲ ಉದ್ಯಮ, ಪಶು ಆಹಾರಗಳು ಮತ್ತು ಬುಕ್‌ಬೈಂಡಿಂಗ್, ಇತರ ವಿಷಯಗಳಲ್ಲಿಯೂ ಸಹ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ವಿಶ್ವದಲ್ಲೇ ಅತಿ ಹೆಚ್ಚು ಹತ್ತಿಯನ್ನು ಉತ್ಪಾದಿಸುವ ದೇಶ ಭಾರತ ಎಂಬುದಕ್ಕೆ ಹೆಮ್ಮೆಯೆನಿಸುತ್ತದೆ.
ಪ್ರತಿ ವರ್ಷ ಅಕ್ಟೋಬರ್ 7 ರಂದು ಜಗತ್ತು ಹತ್ತಿ ದಿನವೆಂದು ಘೋಷಿಸಿದ್ದು, ಅಂತರಾಷ್ಟ್ರೀಯ ಕಾರ್ಯಕ್ರಮವಾಗಿ ಈ ವರ್ಷ (2022) ರಲ್ಲಿ ಮೂರನೇ ಬಾರಿಗೆ ಆಚರಿಸಲಾಗುತ್ತಿದೆ.

ವಿಶ್ವ ಹತ್ತಿ ದಿನದ ಇತಿಹಾಸ

ವಿಶ್ವ ಹತ್ತಿ ದಿನಾಚರಣೆಗೆ ದೊಡ್ಡ ಇತಿಹಾಸವಿಲ್ಲ. ಮೊದಲ ವಿಶ್ವ ಹತ್ತಿ ದಿನವನ್ನು ಅಕ್ಟೋಬರ್ 07, 2019 ರಂದು ವಿಶ್ವ ವ್ಯಾಪಾರ ಸಂಸ್ಥೆ ಘೋಷಿಸಿತು. ಕಾಟನ್-4 ದೇಶಗಳು ಎಂದು ಕರೆಯಲ್ಪಡುವ ದೇಶಗಳಿಂದ ಇದನ್ನು ಪ್ರಾರಂಭಿಸಲಾಯಿತು. ಅವೇ ಬೆನಿನ್, ಬುರ್ಕಿನಾ ಫಾಸೊ, ಚಾಡ್ ಮತ್ತು ಮಾಲಿ. ಹತ್ತಿ ಉದ್ಯಮದ ಕಂಪನಿಗಳಿಗೆ ಹತ್ತಿ ಸಂಬಂಧಿತ ಚಟುವಟಿಕೆಗಳು ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ತಮ್ಮ ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ಈ ದಿನವು ಅವಕಾಶವನ್ನು ಒದಗಿಸಿತು. ಹತ್ತಿ ಬಟ್ಟೆಗಳನ್ನು ಬಳಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಹೆಚ್ಚಿನ ಜನರಿಗೆ ಅರಿವು ಮೂಡಿಸುವುದು ದಿನದ ಉದ್ದೇಶವಾಗಿದೆ.

ವಿಶ್ವ ಹತ್ತಿ ದಿನ 2022ರ ಥೀಮ್

FAO(ಆಹಾರ ಮತ್ತು ಕೃಷಿ ಸಂಘಟನೆ) ಅಧಿಕೃತ ವೆಬ್‌ಸೈಟ್‌ ಪ್ರಕಾರ, 2022 ರಲ್ಲಿ ವಿಶ್ವ ಹತ್ತಿ ದಿನವನ್ನು ಆಚರಿಸುವ ವಿಷಯ “ನೇಯ್ಗೆಯಿಂದ ಹತ್ತಿಗೆ ಉತ್ತಮ ಭವಿಷ್ಯ ಇದೆ” ಎಂಬುದು. ಹತ್ತಿ ಕಾರ್ಮಿಕರು, ಸಣ್ಣ ಹಿಡುವಳಿದಾರರು ಮತ್ತು ಅವರ ಕುಟುಂಬಗಳ ಜೀವನವನ್ನು ಉತ್ತಮಗೊಳಿಸುವ ಸಲುವಾಗಿ ಸುಸ್ಥಿರವಾದ ಹತ್ತಿ ಕೃಷಿಯ ಮೇಲೆ ವಿಷಯ ನಿಂತಿದೆ.

ವಿಶ್ವ ಹತ್ತಿ ದಿನದ ಮಹತ್ವ

ವಿಶ್ವಸಂಸ್ಥೆಯು ಈ ವಿಶ್ವ ಹತ್ತಿ ದಿನವನ್ನು ಔಪಚಾರಿಕವಾಗಿ ಗುರುತಿಸಿರುವುದರಿಂದ, ಹತ್ತಿ ಮತ್ತು ಹತ್ತಿ-ಸಂಬಂಧಿತ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸಲು ಇದು ಒಂದು ಅದ್ಭುತ ಅವಕಾಶವನ್ನು ಒದಗಿಸುತ್ತದೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಹತ್ತಿ-ಸಂಬಂಧಿತ ಉತ್ಪನ್ನಗಳನ್ನು ಮಾರಾಟ ಮಾಡಲು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರವೇಶವನ್ನು ಹೊಂದುವ ಅಗತ್ಯವನ್ನು ಒದಗಿಸುತ್ತದೆ. ಹತ್ತಿ ಬೆಳೆಗಾರರು, ಸಂಶೋಧಕರು ಮತ್ತು ಹತ್ತಿಯ ಉತ್ಪಾದನೆ ಮತ್ತು ಮಾರಾಟದ ಬಗ್ಗೆ ಇತರ ಎಲ್ಲ ಪಾಲುದಾರರಿಗೆ ಶಿಕ್ಷಣ ಮತ್ತು ಸಹಾಯ ಮಾಡುವ ಚಟುವಟಿಕೆಗಳ ಮೂಲಕ ವಿಶ್ವ ಹತ್ತಿ ದಿನವನ್ನು ಪ್ರತಿ ವರ್ಷ ಸ್ಮರಿಸಲಾಗುತ್ತದೆ.

ಬಿಳಿ ಚಿನ್ನ ಎಂದೇ ಕರೆಸಿಕೊಳ್ಳುವ ಹತ್ತಿ ಉತ್ಪಾದನೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ. 10 ರಾಜ್ಯಗಳ ಒಟ್ಟು 120.69ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಉತ್ಪಾದಿಸಲಾಗುತ್ತಿದೆ. ಕಳೆದ ವರ್ಷಾಂತ್ಯಕ್ಕೆ 362.18 ಲಕ್ಷ ಬೇಲ್‌(6.16ಮಿಲಿaನ್‌ ಮೆಟ್ರಿಕ್‌ ಟನ್‌) ಹತ್ತಿ ಉತ್ಪಾದಿಸಲಾಗಿದ್ದು, ಈ ಪ್ರಮಾಣ 2022-23ರಲ್ಲಿ ಶೇ.15ರಷ್ಟು ಏರಿಕೆಯಾಗಲಿದೆ ಎಂದು ಜವಳಿ ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!